ಕೇಂದ್ರ ಸಚಿವರಿಗೆ ವಿರೋಧದ ಧ್ವನಿ ಮನದಟ್ಟು ಮಾಡಲಾಗಿದೆ: ಕಾಗೇರಿ

KannadaprabhaNewsNetwork |  
Published : Feb 10, 2026, 02:45 AM IST
ಮಾಧ್ಯಮದವರ ಜತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. | Kannada Prabha

ಸಾರಾಂಶ

ಉತ್ತರಕನ್ನಡ ಜಿಲ್ಲೆಯು ಅನೇಕ ಯೋಜನೆಗಳ ಭಾರವನ್ನು ತೆಗೆದುಕೊಂಡಿದ್ದು, ಪ್ರಕೃತಿ ಅಸಮತೋಲನ ನಿರ್ಮಾಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಹೊನ್ನಾವರದ ಶರಾವತಿ ಪಂಪ್ಡ್‌ ಸ್ಟೊರೇಜ್‌, ಅಘನಾಶಿನಿ- ಬೇಡ್ತಿ ನದಿ ತಿರುವು ಯೋಜನೆ ವಿಷಯದ ಕುರಿತು ಜಿಲ್ಲೆಯ ಜನರ ಆತಂಕ ಮತ್ತು ವಿರೋಧದ ಧ್ವನಿಯನ್ನು ಕೇಂದ್ರ ಸರ್ಕಾರದ ಸಚಿವರಿಗೆ ಮನದಟ್ಟು ಮಾಡಲಾಗಿದ್ದು, ಅಲ್ಲದೇ ಈ ಯೋಜನೆಗಳನ್ನು ಕೈಬಿಡುವಂತೆ ನಿಯೋಗದ ಮೂಲಕ ವಿನಂತಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೇಂದ್ರದ ವಿವಿಧ ಇಲಾಖೆಯ ಸಚಿವರನ್ನು ನಿಯೋಗದ ಮೂಲಕ ಭೇಟಿಯಾಗಿ ಮಾಧ್ಯಮದವರ ಜತೆ ಮಾತನಾಡಿದರು. ಉತ್ತರಕನ್ನಡ ಜಿಲ್ಲೆಯು ಅನೇಕ ಯೋಜನೆಗಳ ಭಾರವನ್ನು ತೆಗೆದುಕೊಂಡಿದ್ದು, ಪ್ರಕೃತಿ ಅಸಮತೋಲನ ನಿರ್ಮಾಣವಾಗುತ್ತಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವನ್ನು ರಕ್ಷಣೆ ಮಾಡಲಾಗದ ಸ್ಥಿತಿ ಇದೆ. ಜಿಲ್ಲೆಯ 8 ಡ್ಯಾಂ, ಕೈಗಾ, ಸೀಬರ್ಡ್‌, ಕೊಂಕಣ ರೈಲ್ವೇಯಿಂದ ಸಾವಿರಾರು ಕುಟುಂಬ ನಿರಾಶ್ರಿತರಾಗಿವೆ. ಬೃಹತ್ ಯೋಜನೆಗಳಿಂದ ಗುಡ್ಡ ಕುಸಿತ ಉಂಟಾಗುತ್ತಿದೆ. ಈ ಹಿನ್ನೆಲೆ ಪ್ರಸ್ತಾಪಿತ ನದಿ ಜೋಡಣೆ ಯೋಜನೆ ಮುಂದುವರೆಸಬಾರದು ಎಂದು ಹೇಳಲಾಗಿದೆ ಎಂದರು.

ಕೇಂದ್ರ ಸಚಿವರಾದ ಸಿ.ಆರ್.ಪಾಟೀಲ, ಭೂಪೇಂದ್ರ ಯಾದವ, ಪ್ರಹ್ಲಾದ್ ಜೋಶಿ, ಎಚ್‌.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ ಮತ್ತು ಮಂತ್ರಾಲಯದ ಅಧಿಕಾರಿಗಳ ಜತೆ ಉಪಯುಕ್ತ ಚರ್ಚೆಯಾಗಿದೆ. ಯೋಜನೆ ಅನುಷ್ಠಾನಕ್ಕೆ ಮುನ್ನ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಬೇಕೆಂದು ಹೇಳಲಾಗಿದೆ. ಅಲ್ಲದೇ ಪ್ರಸ್ತಾಪಿತ ಯೋಜನೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸಲಾಗಿದೆ. ರಾಜ್ಯ ಸರ್ಕಾರದಿಂದ ಇನ್ನೂ ಕೇಂದ್ರ ಸರ್ಕಾರಕ್ಕೆ ಮಾಹಿತಿ ಬಂದಿಲ್ಲ. ಮಾಹಿತಿ ಸಲ್ಲಿಕೆಯಾದ ಬಳಿಕ ನಿಯೋಗದ ಎಲ್ಲ ಅಂಶಗಳನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೂ ಈಗಾಗಲೇ ನಿಯೋಗದ ಮೂಲಕ ಮನವರಿಕೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸಂಬಂಧ ಹಿನ್ನೆಲೆ ಯಾವುದಾದರೂ ಯೋಜನೆಗಳನ್ನು ರಾಜ್ಯದವರು ಪ್ರಸ್ತಾಪ ಮಾಡಿ ಕೇಂದ್ರಕ್ಕೆ ಕಳುಹಿಸಿದಾಗ ಕೇಂದ್ರ ಎಲ್ಲ ಅಳತೆಗೋಲುಗಳಿಗೆ ಒಪ್ಪಿಗೆಯಾದಾಗ ಈ ಎಲ್ಲ ಜಾರಿಯ ಸಂಗತಿ ಮುನ್ನೆಲೆಗೆ ಬರುತ್ತದೆ. ಬೇಡ್ತಿ-ಅಘನಾಶಿನಿ ವಿಷಯ ಅನೇಕ ದಶಕಗಳಿಂದ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಆಗಿನ ಎಲ್ಲ ರಾಜ್ಯ ಸರ್ಕಾರಗಳೂ ಅನುಷ್ಠಾನಕ್ಕೆ ಮುಂದಾಗಿಲ್ಲ. ಇಂದಿನ ರಾಜ್ಯ ಸರ್ಕಾರ ಜಾರಿಗೆ ಮುಂದಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿ ಯೋಜನೆ ನಿಲ್ಲಿಸುವಂತೆ ನಾವೆಲ್ಲರೂ ಸೇರಿ ರಚನಾತ್ಮಕ ಪ್ರಯತ್ನ ಮಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಾಹಿತ್ಯಕ್ಕೆ ಗದುಗಿನ ಕೊಡುಗೆ ಅಪಾರ: ಬಸವರಾಜ ಜಾಲಿಹಾಳ
ಹಂಪಿ ಉತ್ಸವ ಯಶಸ್ವಿಗೆ ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ