ಕನ್ನಪ್ರಭ ವಾರ್ತೆ ಸೋಮವಾರಪೇಟೆ
ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಗೂಡ್ಸ್ ವಾಹನವೊಂದು ಸಮೀಪದ ಕಾಗಡಿಕಟ್ಟೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.ಘಟನೆಯಿಂದಾಗಿ ವಾಹನದಲ್ಲಿದ್ದ ಈರ್ವರು ಆರೋಪಿಗಳು ಹಾಗೂ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ ಮೂರು ಜಾನುವಾರುಗಳಿಗೆ ಗಾಯಗಳಾಗಿವೆ. ಗಾಯಗೊಂಡ ಆರೋಪಿಗಳನ್ನು ಬೆಂಗಾವಲು ವಾಹನದಲ್ಲಿ ರಾತ್ರಿಯೇ ಕರೆದೊಯ್ಯಲಾಗಿದ್ದು, ಗಾಯಗೊಂಡ ಮೂರು ಗೋವುಗಳನ್ನು ಸ್ಥಳೀಯರು ರಕ್ಷಿಸಿ ಪೊಲೀಸರ ಸಹಾಯದಿಂದ ಪಶುಚಿಕಿತ್ಸಾಲಯಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೊಳಲುಗೋಡು ನಿವಾಸಿಗಳಾದ ಅಲ್‌ಮಸ್ ಖಾನ್ ಮತ್ತು ಸಯ್ಯದ್ ಗಫೂರ್ ಹಾಗೂ ಬೆಂಗಾವಲು ವಾಹನವಾಗಿ ಬಳಕೆಯಾಗಿದ್ದ ಇನ್ನೋವಾ ಕಾರನ್ನು ಚಾಲಿಸುತ್ತಿದ್ದ ದಿಲ್‌ವಾಜ್ ಎಂಬವರುಗಳ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಘಟನೆ ಬಗ್ಗೆ ಸ್ಥಳೀಯರು ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ವಿವರಣೆ ನೀಡಿದ್ದು, ಸ್ಥಳಕ್ಕೆ 112 ಸಿಬ್ಬಂದಿಗಳಾದ ಎ.ಎಸ್.ಐ. ಮಂಜುನಾಥ್ ಹಾಗೂ ಮೋಹನ್‌ಕುಮಾರ್ ಅವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಾದ ಅಲ್‌ಮಸ್ ಖಾನ್, ಸಯ್ಯದ್ ಗಫೂರ್, ದಿಲ್‌ವಾಜ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ 112 ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಎಸ್‌ಐ ಮಂಜುನಾಥ್ ಅವರು ನೀಡಿದ ದೂರಿನಂತೆ ಸೋಮವಾರಪೇಟೆ ಠಾಣೆಯಲ್ಲಿ ಮೂವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.ರಾತ್ರಿ ಗೋವುಗಳ ಸಾಗಾಟಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಮಾತ್ರವಲ್ಲದೇ ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ, ಗೋಮಾಂಸ ಮಾರಾಟಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಗೋವುಗಳನ್ನು ಪೂಜಿಸುವ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವುದಕ್ಕಾಗಿಯೆ ಮತಾಂಧರು ಗೋಹತ್ಯೆ ನಡೆಸುತ್ತಿದ್ದಾರೆ. ಇಂತಹ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಆಗ್ರಹಿಸಿದ್ದಾರೆ.ಈ ಬಗ್ಗೆ ಸಂಘಟನೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುನಿಲ್ ಮಾದಾಪುರ, ತಾಲೂಕು ಸಂಯೋಜಕ್ ಉಮೇಶ್, ಕಾರ್ಯಕರ್ತರಾದ ದೀಪಕ್, ಕಿರಣ್, ಪ್ರವೀಣ್, ಹರ್ಷ, ವಿನಯ್, ಅನೂಜ್, ಸೋಮಶೇಖರ್, ರತನ್ ಸೇರಿದಂತೆ ಕಾರ್ಯಕರ್ತರು ಠಾಣಾಧಿಕಾರಿ ಗೋಪಾಲ್ ಅವರಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.