ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಮೇಲೆ ಖಚಿತ ಮಾಹಿತಿ ಪಡೆದು ಮಾಳಮಾರುತಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಯಾವುದೇ ದಾಖಲೆಯಿಲ್ಲದೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿರುವುದು ಪತ್ತೆಯಾಗಿದೆ. ಇನ್ಸ್‌ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಟ್ಯಾಂಕರ್‌ನಲ್ಲಿದ್ದ ಸುಮಾರು ₹ 17 ಲಕ್ಷ ಮೌಲ್ಯದ 17 ಸಾವಿರ ಲೀಟರ್ ಡೀಸೇಲ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ತನಿಖೆ ವೇಳೆ ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಎಂಬಾತನ ಪಾತ್ರ ಬೆಳಕಿಗೆ ಬಂದಿದೆ. ಈ ಜಾಲವು ಒಬ್ಬಿಬ್ಬರಿಗೆ ಸೀಮಿತವಾಗದೆ, ದೊಡ್ಡ ಮಟ್ಟದ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಸ್ಮಗ್ಲಿಂಗ್ ಜಾಲವಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಜಾಲದಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಕೆಲವರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ತೈಲ ಉತ್ಪನ್ನಗಳನ್ನು ಭಾರತಕ್ಕೆ ತರಲಾಗುತ್ತಿತ್ತು. ಕೆಲ ಹಡಗುಗಳ ಮಾಲೀಕರು ಈ ಅಕ್ರಮ ಜಾಲದೊಂದಿಗೆ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಲ್ಫ್ ದೇಶಗಳ ತೈಲ ಉತ್ಪಾದಕರೊಂದಿಗೆ ಸ್ಮಗ್ಲರ್‌ಗಳು ನೇರ ಸಂಪರ್ಕ ಹೊಂದಿರುವ ಅನುಮಾನವಿದೆ.ಅಕ್ರಮವಾಗಿ ತರಲಾಗುತ್ತಿದ್ದ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಡೀಸೇಲ್ ಬಂಕ್‌ಗಳಿಗೆ ಈ ಡೀಸೆಲ್ ಸರಬರಾಜಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಪೊಲೀಸರು ಪ್ರಕರಣವನ್ನು ಎರಡು ಆಯಾಮಗಳಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದು, ವಿಶೇಷ ತಂಡಗಳನ್ನು ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಕರಣದ ಕುರಿತು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ.