ಸಂಡೂರು: ಗಡಾದ್ ರಮೇಶ ಅವರು ತಾಲೂಕಿನ ಯರ‍್ರಯ್ಯನಹಳ್ಳಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿ ಮರ್ರಂ (ಗ್ರಾವೆಲ್) ಸಾಗಿಸಿರುವುದು ದೃಢಪಟ್ಟಿದೆ. ಆರೋಪಿಗಳಾದ ಗಡಾದ್ ರಮೇಶ ಹಾಗೂ ಬೊಮ್ಮಘಟ್ಟ ಭೀಮಪ್ಪ ಅವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಬಿ.ಆರ್. ಮಮತಾ ಅವರು ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದಾರೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಕುರಿತಾಗಿ ನಾನು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದೆ. ಅದಕ್ಕೆ ಪ್ರತಿಯಾಗಿ ಗಡಾದ್ ರಮೇಶ ಅವರು ತಾನೊಬ್ಬ ಕಾಂಟ್ರ್ಯಾಕ್ಟರ್. ಮರ‍್ರಂ ತೆಗೆದು ಸಾಗಾಣಿಕೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದಿದ್ದೇನೆ. ರಾಜಧನ ಕಟ್ಟಿ ಮರ‍್ರಂ ಸಾಗಾಣಿಕೆ ಮಾಡಿದ್ದೇನೆ. ಬಂಗಾರು ಹನುಮಂತು ಅವರ ಬಳಿ ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತು ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸುಳ್ಳು ಆರೋಪ ಮಾಡಬಾರದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಪ್ರತಿ ಪ್ರದರ್ಶಿಸಿದರು.ಯರ‍್ರಯ್ಯನಹಳ್ಳಿ ಗ್ರಾಮದ ಸರ್ವೆ ನಂ. ೨೪೮ರಲ್ಲಿ ಮರ‍್ರಂ ಗಣಿಗಾರಿಕೆಗೆ ಅನುಮತಿ ಪಡೆದು ಸರ್ವೆ ನಂ. ೨೪೭ರಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ. ಭೂವಿಜ್ಞಾನಿಗಳು ಅಕ್ರಮ ಗಣಿಗಾರಿಕೆ ನಡೆಸಿರುವ ಯರ‍್ರಯ್ಯನಹಳ್ಳಿಯ ಸರ್ವೆ ನಂ. ೨೪೭ರಲ್ಲಿ ಅಂದಾಜು ೮೯೨೩.೬೩ ಮೆ. ಟನ್ ಮರ‍್ರಂ ಅನ್ನು ಅಕ್ರಮವಾಗಿ ತೆಗೆದು ಸಾಗಾಣಿಕೆ ಮಾಡಲಾಗಿದೆ. ಕರ್ನಾಟಕ ಉಪ ಖನಿಜ ನಿಯಮಾವಳಿಯಂತೆ ಅಂದಾಜು ₹೩೨ ಲಕ್ಷ ಶುಲ್ಕ ಹಾಕಿದ್ದಾರೆ. ಈ ಜಮೀನಿನಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಮರು ಸರ್ವೆ ಮಾಡಬೇಕು. ಅಲ್ಲಿ ಸುಮಾರು ೧೦ ಲಕ್ಷ ಟನ್ ಮರ‍್ರಂ ಸಾಗಾಣಿಕೆ ಮಾಡಲಾಗಿದೆ. ₹೫೦ರಿಂದ ₹೬೦ ಕೋಟಿ ಶುಲ್ಕವನ್ನು ಅಕ್ರಮವಾಗಿ ಮರ‍್ರಂ ಸಾಗಾಣಿಕೆ ಮಾಡಿದವರಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದು ೭-೮ ತಿಂಗಳಾದ ಮೇಲೆ ಸ್ವಾಮಿಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಬಳಿ ನಾನು ಚುನಾವಣಾ ಪ್ರಚಾರ ಮಾಡಿದ್ದಾಗಿ ಪೊಲೀಸರು ದೂರು ದಾಖಲಿಸಿದ್ದಾರೆ. ನಾನು ಭಾಷಣ ಮಾಡಿದ ಸ್ಥಳದಲ್ಲಿಯೇ ಕಾಂಗ್ರೆಸ್‌ನವರೂ ಚುನಾವಣಾ ಭಾಷಣ ಮಾಡಿದ್ದಾರೆ. ಅವರ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.ಗಡಾದ್ ರಮೇಶ್ ಅವರು ನಡೆಸಿರುವ ಅಕ್ರಮ ಗಣಿಗಾರಿಕೆಯ ಕುರಿತು ಸಚಿವ ಸಂತೋಷ್ ಲಾಡ್ ಹಾಗೂ ಸಂಸದ ಈ. ತುಕಾರಾಂ ಅವರು ಏಕೆ ಮಾತನಾಡುತ್ತಿಲ್ಲ? ಸಂತೋಷ್ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಗೌರವದ ಮಾತನಾಡುತ್ತಾರೆ. ಇದು ಮುಂದುವರಿದರೆ, ಅಲ್ಲಿಯೇ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಲಾಗುವುದು ಎಂದು ಕಿಡಿಕಾರಿದರು.
ನನ್ನನ್ನಾಗಲಿ, ಬಿಜೆಪಿ ಕಾರ್ಯಕರ್ತರನ್ನಾಗಲಿ ಕೆಣಕಬೇಡಿ. ವೈಯಕ್ತಿಕವಾಗಿ ತೇಜೋವಧೆ ಮಾಡಿದರೆ, ನಾವು ಸೂಕ್ತ ಕ್ರಮ ಕೈಗೊಳ್ಳುವೆವು ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡರಾದ ಟಿ.ಎನ್. ನಾಗರಾಜ, ವಸಂತಕುಮಾರ್, ಅನಿತಾ ವಸಂತಕುಮಾರ್, ವಾಮಣ್ಣ, ಅಶೋಕ್‌ಕುಮಾರ್, ನರಸಿಂಹ, ವಿಶ್ವನಾಥ ರೆಡ್ಡಿ, ಪ್ರಭುಗೌಡ, ಮುರುಗೇಶ್ ಉಪಸ್ಥಿತರಿದ್ದರು.