ಧಾರವಾಡ: ಇತ್ತೀಚಿಗೆ ಧರ್ಮಸ್ಥಳದ ಕುರಿತಾಗಿ ಗೊಂದಲ ಉಂಟು ಮಾಡುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಖೇದದ ಸಂಗತಿ. ಇಂತಹ ಘಟನೆಗಳಿಂದ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಕುಟುಂಬವನ್ನು ಉದ್ದೇಶ ಪೂರ್ವಕವಾಗಿ ಕಳಂಕಿತಗೊಳಿಸುವ ಸಮಾಜ ವಿರೋಧಿ ಶಕ್ತಿಗಳ ಷಡ್ಯಂತ್ರ ಖಂಡನೀಯ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಹೇಳಿದರು.
ಅತಿಥಿ ಡಾ. ವೈ.ಎಂ.ಭಜಂತ್ರಿ ಮಾತನಾಡಿ, ಹೆಗ್ಗಡೆಯವರು ಹಾಗೂ ಕ್ಷೇತ್ರ ಧರ್ಮಸ್ಥಳ ಇಡೀ ಜಗತ್ತಿಗೆ ನೀಡಿದ ಕೊಡುಗೆ ಅಪಾರ. ಬತ್ತಿಗೆ ಅಂಟಿದ ಕಾಡಿಗೆಯಂತೆ, ಸೂರ್ಯ ಮತ್ತು ಚಂದ್ರರಿಗೆ ತಗಲುವ ಗ್ರಹಣದಂತೆ ಈಗಿನ ಪರಿಸ್ಥಿತಿ ಇದೆ. ಮುಂದೆ ಗ್ರಹಣ ಬಿಡಲೇಬೇಕು. ಸೂರ್ಯ ಚಂದ್ರರಂತೆ ಹೆಗ್ಗಡೆಯವರು ನಾಡನ್ನು ಮತ್ತೆ ಬೆಳಗಲೇಬೇಕು ಎಂದರು.
ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಮಹಾವೀರ ಉಪಾದ್ಯೆ ಮಾತನಾಡಿ, ಕಾನೂನು ತನ್ನ ಕಾರ್ಯ ಮಾಡಲಿ ಆದರೆ, ಹಾದಿ ಬೀದಿಗಳಲ್ಲಿ ನ್ಯಾಯ ಕೇಳುವುದು, ವಾಕ್ ಸ್ವಾತಂತ್ರ್ಯವಿದೆ ಎಂದು ಯಾರದೋ ಮಾನಹಾನಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ನಂಬಿಕೆಯ ಮೇಲೆ ಸವಾರಿಯಾಗುತ್ತಿದ್ದರೂ ನಾವು ಕಣ್ಮುಚ್ಚಿ ಕುಳಿತುಕೊಳ್ಳ್ಳಬೇಕೆ? ಕಳೆದ 52 ವರ್ಷಗಳಿಂದ ಯಾವುದೇ ಜಾತಿ, ಧರ್ಮ, ಪಂಥ ನೋಡದೇ ಶಿಕ್ಷಣ, ಆರೋಗ್ಯ ಸೇವೆ, ಸ್ವ-ಉದ್ಯೋಗ ಸ್ವಾವಲಂಬನೆ ಬದುಕು ನೀಡುತ್ತಿರುವ ಖಾವಂದರಿಗೆ ಈ ಸಂಸ್ಥೆಯ ಸದಸ್ಯರಾದ ನಾವೆಲ್ಲ ನೈತಿಕ ಬೆಂಬಲ ನೀಡೋಣ ಎಂದರು.ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜೆ.ಎಸ್.ಎಸ್ ಎಂ.ಸಿ.ಎ ಕಾಲೇಜಿನ ನಿರ್ದೇಶಕ ಡಾ. ಸೂರಜ್ ಜೈನ್ ಮಾತನಾಡಿದರು. ಪ್ರಿಯಾಂಕಾ ಜಾಧವ ಪ್ರಾರ್ಥಿಸಿದರು. ಜಿನ್ನಪ್ಪ ಕುಂದಗೋಳ ವಂದಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ 25 ಅಂಗ ಸಂಸ್ಥೆಗಳ ಮುಖ್ಯಸ್ಥರು ವೇದಿಕೆ ಮೇಲಿದ್ದರು.