ರೈತರ ಜಮೀನುಗಳಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಂಬ ಅಳವಡಿಕೆ

KannadaprabhaNewsNetwork |  
Published : Jun 25, 2025, 11:48 PM IST
ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದು.  | Kannada Prabha

ಸಾರಾಂಶ

ಗಾಳಿ ವಿದ್ಯುತ್ ಉತ್ಪಾದನೆಗಾಗಿ ಬೃಹತ್ ಟರ್ಬೈನ್‌ಗಳನ್ನು ಅಳವಡಿಸುವ ವೇಳೆಯಲ್ಲಿ ರೈತರೊಂದಿಗೆ ಚರ್ಚಿಸಿ, ಜಮೀನು ಲೀಸ್‌ಗೆ ಪಡೆದುಕೊಂಡು ರೈತರಿಗೆ ಹಣ ನೀಡುತ್ತಾರೆ. ಆದರೆ ವಿದ್ಯುತ್ ಕಂಬಗಳ ಅಳವಡಿಕೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯ ರೈತರ ಪಾಲಿಗೆ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ಕಂಟಕಪ್ರಾಯವಾಗಿ ಪರಿಣಮಿಸುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ನಿತ್ಯವೂ ರೈತರ ಶೋಷಣೆ ವ್ಯಾಪಕವಾಗಿ ನಡೆಯುತ್ತಿದೆ. ಗಾಳಿ ವಿದ್ಯುತ್ ಕಂಪನಿಗಳ ಕಾರ್ಯವೈಖರಿಯ ಮೇಲೆ ಯಾರದ್ದೂ ಯಾವುದೇ ತೆರನಾದ ಹಿಡಿತವಿಲ್ಲದೇ ಇರುವ ಕಾರಣ ಅವರು ಹೇಳಿದ್ದೇ ಕಾನೂನು, ಅವರು ಮಾಡಿದ್ದೇ ಕೆಲಸ ಎನ್ನುವಂತಾಗಿದೆ.

ಪ್ರಸ್ತುತ ಜಿಲ್ಲೆಯ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿನ ನರೇಗಲ್ಲ, ಕೋಟುಮಚಗಿ, ಯರೇಬೇಲೇರಿ, ಕುರುಡಗಿ, ಅಬ್ಬಿಗೇರಿ, ಜಕ್ಕಲಿ ಸುತ್ತಮುತ್ತಲ 10ಕ್ಕೂ ಹೆಚ್ಚಿನ ಗ್ರಾಮಗಳ ವ್ಯಾಪ್ತಿಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಗಾಳಿ ವಿದ್ಯುತ್ ಯಂತ್ರಗಳ ಅಳವಡಿಕಾ ಕಾರ್ಯ ಪ್ರಗತಿಯಲ್ಲಿದೆ. ಇದೇ ಭಾಗದಲ್ಲಿನ ರೈತರು ಕೂಡಾ ಅಷ್ಟೇ ಪ್ರಮಾಣದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬೇಕಾಬಿಟ್ಟಿ ವಿದ್ಯುತ್ ಕಂಬ ಅಳವಡಿಕೆ: ಗಾಳಿ ವಿದ್ಯುತ್ ಉತ್ಪಾದನೆಗಾಗಿ ಬೃಹತ್ ಟರ್ಬೈನ್‌ಗಳನ್ನು ಅಳವಡಿಸುವ ವೇಳೆಯಲ್ಲಿ ರೈತರೊಂದಿಗೆ ಚರ್ಚಿಸಿ, ಜಮೀನು ಲೀಸ್‌ಗೆ ಪಡೆದುಕೊಂಡು ರೈತರಿಗೆ ಹಣ ನೀಡುತ್ತಾರೆ. ಆದರೆ ಅದೇ ಟರ್ಬೈನ್‌ನಿಂದ ಉತ್ಪಾದನೆಯಾದ ವಿದ್ಯುತ್‌ನ್ನು ಗ್ರಿಡ್‌ಗೆ ಸಾಗಾಟ ಮಾಡಲು ಬೇಕಾದ ಸಣ್ಣ ಸಣ್ಣ ವಿದ್ಯುತ್ ಕಂಬಗಳ ಅಳವಡಿಕೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದ್ದು, ಕನಿಷ್ಠ ಜಮೀನುಗಳ ಮಾಲೀಕರನ್ನು (ರೈತರನ್ನು) ಕೇಳದೇ ತಮಗೆ ಎಲ್ಲಿ ಸಮೀಪವಾಗುತ್ತದೆಯೋ ಆ ಹೊಲದ ಮೂಲಕವೇ ವಿದ್ಯುತ್ ಕಂಬಗಳನ್ನು ಬೇಕಾಬಿಟ್ಟಿಯಾಗಿ ಅಳವಡಿಕೆ ಮಾಡುತ್ತಿದ್ದಾರೆ.

ಬಡ ಮಧ್ಯಮ ರೈತರಿಗೆ ತೊಂದರೆ: ನರೇಗಲ್ಲ ಹೋಬಳಿ ಭಾಗದಲ್ಲಿ ಟಾಟಾ ಪಾವರ್, ರಿನಿವ್, ಎವರ್ರಿನಿವ್ ಸೇರಿದಂತೆ ವಿವಿಧ ಹೆಸರಿನ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಂಪನಿಗಳ ವಿದ್ಯುತ್ ಸಾಗಾಟ ಮಾಡುವ ಕಂಬಗಳನ್ನು ಸಣ್ಣ, ಮಧ್ಯಮ ರೈತರ ಜಮೀನುಗಳಲ್ಲಿ ಅಡ್ಡಾದಿಡ್ಡಿಯಾಗಿ ಅಳವಡಿಸುತ್ತಿದೆ. ಇದರಿಂದಾಗಿ ಅರ್ಧ, ಒಂದು, ಒಂದೂವರೆ, ಎರಡು ಎಕರೆಗಳಷ್ಟು ಜಮೀನು ಹೊಂದಿರುವ ರೈತರ ಜಮೀನುಗಳಲ್ಲಿ ನಾಲ್ಕೈದು ಕಂಬಗಳನ್ನು ಅಳವಡಿಸಿದರೆ ಉಳುಮೆಗೆ ಜಾಗವೇ ಇಲ್ಲದಂತಾಗುತ್ತದೆ. ಅವರಿಗೆ ಸಾಗುವಳಿ ಮಾಡಲು ಕೂಡಾ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಭಾವಿಗಳ ದೌರ್ಜನ್ಯ: ನರೇಗಲ್ಲ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಈ ರೀತಿಯ ಅಕ್ರಮದಿಂದಾಗಿ ರೈತರು ರೋಸಿ ಹೋಗಿದ್ದು, ಯಾರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೋ ತಿಳಿಯದಾಗಿದೆ. ಗ್ರಾಮದಲ್ಲಿರುವ ಮುಖಂಡರಿಗೆ ಹೇಳಿದರೆ ಅವರು, ಇದೆಲ್ಲ ನಮ್ಮ ಪಕ್ಷದ ಯವ ನಾಯಕರ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ, ಹಾಗಾಗಿ ನಾವೇನು ಮಾಡಲು ಆಗುವುದಿಲ್ಲ ಎನ್ನುತ್ತಾರಂತೆ, ಪೊಲೀಸ್ ಠಾಣೆಗೆ ತೆರಳಿದರೆ, ಅಲ್ಲಿನ ಅಧಿಕಾರಿಗಳು ಕಂಪನಿಯ ವಿರುದ್ಧವೇ ಮಾತನಾಡುತ್ತೀರಾ? ಅವರೇನು ಅಕ್ರಮ ಮಾಡಲು ಸಾಧ್ಯವಿಲ್ಲ ಎಂದು ಮರಳಿ ಕಳುಹಿಸುತ್ತಾರಂತೆ. ಇನ್ನು ಸಾಮಾಜಿಕ ಸಂಘಟನೆಗಳು, ಹೋರಾಟಗಾರರಿಗೆ ತಿಳಿಸಿದರೆ ಅವರು ಕೂಡಾ ಕೇಳಿ ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂದು ನೊಂದು ಹೇಳುತ್ತಾರೆ ರೈತರು.

ನಿಯಮ ಏನು ಹೇಳುತ್ತದೆ?: ರೈತರ ಜಮೀನುಗಳಲ್ಲಿ ಅಳವಡಿಕೆ ಮಾಡಲಾಗಿರುವ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಸಾಗಾಟ ಮಾಡುವುದು ಸೇರಿದಂತೆ ಇನ್ನುಳಿದ ಸಾಮಾನ್ಯ ವಿದ್ಯುತ್ ಸಾಗಾಟ ಮಾಡುವ ಕಂಬಗಳ ಅಳವಡಿಕೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರೈತರ ಜಮೀನುಗಳ ಮಧ್ಯದಲ್ಲಿ ಬರುವಂತಿಲ್ಲ, ಸಾಧ್ಯವಾದಷ್ಟು ರಸ್ತೆಗಳ ಪಕ್ಕದಲ್ಲಿ, ಬದುವಿನಲ್ಲಿ ಹಾಕಬೇಕು. ಒಂದೊಮ್ಮೆ ರೈತರ ಜಮೀನುಗಳಲ್ಲಿ ಅಳವಡಿಕೆ ಮಾಡುವುದು ಅನಿವಾರ್ಯವಾದಲ್ಲಿ ರೈತರಿಂದ ಲಿಖಿತ ಒಪ್ಪಿಗೆ ಪಡೆಯಬೇಕು ಮತ್ತು ಅದಕ್ಕೆ ತಕ್ಕದಾದ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಇದಾವುದೂ ಪಾಲನೆಯಾಗುತ್ತಿಲ್ಲ.

ದೊರೆಯುತ್ತಿಲ್ಲ ಪರಿಹಾರ: ರೈತರ ಜಮೀನುಗಳಲ್ಲಿ ಒಂದು ವಿದ್ಯುತ್‌ ಕಂಬದ ಅಳವಡಿಕೆಗೆ ₹1 ಲಕ್ಷ ಹಾಗೂ ದೊಡ್ಡ ಕಂಬಕ್ಕೆ (ಪ್ರಮುಖ ರಸ್ತೆಯ ಪಕ್ಕದಲ್ಲಿನ) ₹2 ಲಕ್ಷ ಪರಿಹಾರ ಕೊಡಲಾಗುತ್ತಿದೆ ಎಂದು ಕಂಪನಿ ಪ್ರತಿನಿಧಿಗಳು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ರೈತರಿಗೆ ಅಷ್ಟೊಂದು ಪರಿಹಾರ ದೊರೆಯುತ್ತಿಲ್ಲ. ಇದರಲ್ಲಿಯೂ ಮದ್ಯವರ್ತಿಗಳು ವ್ಯಾಪಕವಾಗಿ ರೈತರನ್ನು ಶೋಷಣೆ ಮಾಡುತ್ತಿದ್ದು, ಅವರೆಲ್ಲ ಒಂದಲ್ಲ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುತ್ತಾರೆ ಎನ್ನುವುದು ಕೂಡಾ ವಾಸ್ತವದ ಸಂಗತಿಯಾಗಿದೆ.

ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿನ ನೂರಾರು ರೈತರಿಗೆ ನಿರಂತರವಾಗಿ ಶೋಷಣೆಯಾಗುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವವರೇ ಇಲ್ಲದಂತಾಗಿದೆ. ಜಿಲ್ಲಾಧಿಕಾರಿ ಕೂಡಲೇ ಎಲ್ಲ ಫ್ಯಾನ್ ಕಂಪನಿಗಳ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ನಡೆಸಬೇಕು. ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳುತ್ತಾರೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!