ತಿಪಟೂರು ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ

KannadaprabhaNewsNetwork |  
Published : May 08, 2026, 01:30 AM IST
ಅಕ್ರಮ ಮದ್ಯ ಮಾರಾಟ | Kannada Prabha

ಸಾರಾಂಶ

ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ ಅಧಿಕಾರಿಗಳೇ ಅಕ್ರಮ ಮಾರಾಟಗಾರರಿಗೆ ಶಾಮೀಲಾಗಿ ಕೂಲಿ, ಬಡ, ಮಧ್ಯಮ ಮತ್ತು ಮರ್ಯಾದಸ್ತ ಕುಟುಂಬಗಳೂ ಬೀದಿ ಪಾಲಾಗುವಂತಾಗಿದೆ ಎಂಬುದು ಮಹಿಳೆಯರ ಆರೋಪವಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನಾದ್ಯಂತ ಮೂಲೆ ಮೂಲೆಗಳ ಹಳ್ಳಿಗಳೆಲ್ಲೆಲ್ಲಾ ಅಕ್ರಮ ಮದ್ಯ ಮಾರಾಟ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದನ್ನು ಕಂಡೂ ಕಾಣದಂತಿರುವ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತಾಲೂಕಿನ ಬಹುತೇಕ ಮಹಿಳಾ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು, ಮುಖಂಡರುಗಳು ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದೊಂದು ಗ್ರಾಮದಲ್ಲಿ ಎರಡು-ಮೂರು ಅಂಗಡಿಗಳಲ್ಲಿ ಅಕ್ರಮವಾಗಿ ದುಬಾರಿ ಬೆಲೆಗೆ ಮದ್ಯ ಮಾರುತ್ತಿರುವುದರಿಂದ ಬಡ ಹಾಗೂ ಮಧ್ಯಮ ಕುಟುಂಬಗಳು ಬೀದಿಪಾಲಾಗುತ್ತಿರುವ ಬಗ್ಗೆ ಅಬಕಾರಿ, ಪೊಲೀಸ್ ಇಲಾಖೆಗಳಿಗೆ ತಿಳಿಸಿದರೂ ಈ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ ಅಧಿಕಾರಿಗಳೇ ಅಕ್ರಮ ಮಾರಾಟಗಾರರಿಗೆ ಶಾಮೀಲಾಗಿ ಕೂಲಿ, ಬಡ, ಮಧ್ಯಮ ಮತ್ತು ಮರ್ಯಾದಸ್ತ ಕುಟುಂಬಗಳೂ ಬೀದಿ ಪಾಲಾಗುವಂತಾಗಿದೆ ಎಂಬುದು ಮಹಿಳೆಯರ ಆರೋಪವಾಗಿದೆ.

ಬಡ ಕುಟುಂಬದ ಗಂಡಸರು ಕುಡಿತದ ದಾಸರಾಗುತ್ತಿದ್ದು ಕೂಲಿ ಮಾಡಿ ಅದರಿಂದ ಬಂದ ಹಣವನ್ನು ಕುಡಿತಕ್ಕೇ ಖರ್ಚು ಮಾಡುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟಕರವಾಗುತ್ತಿದೆ ಎಂದು ಮಹಿಳೆಯರು ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಾರ್‌ಗಳವರು ಮರ‍್ನಾಲ್ಕು ಹುಡುಗರನ್ನು ಇಟ್ಟುಕೊಂಡು ಕಳ್ಳಮಾರ್ಗದಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಅನೇಕ ಸಂಸಾರಗಳು ಆರ್ಥಿಕ ಸಂಕಷ್ಠಗಳಿಗೆ ಗುರಿಯಾಗುತ್ತಿರುವುದಲ್ಲದೆ ಸಾಕಷ್ಟು ಕುಟುಂಬಗಳು ದೌರ್ಜನ್ಯಕ್ಕೊಳಗಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಯುವಕರು, ವಿದ್ಯಾರ್ಥಿಗಳು ಎಣ್ಣೆ ದಾಸರು

ಹಳ್ಳಿಗಳಲ್ಲಿ ಯಾರೇ ಕೆಲಸಕ್ಕೆ ಕರೆದರೂ ಸಂಜೆಗೆ ಎಣ್ಣೆ ಹಾಕಿಸುತ್ತೀರಾ ಎಂದು ಕೇಳುವಂತಾಗಿದೆ. ಸಣ್ಣಪುಟ್ಟ ಸಮಾರಂಭಗಳಿದ್ದರೂ ಹಳ್ಳಿಗಳಲ್ಲಿ ಯುವಕರಿಗೆ ಎಣ್ಣೆ ಪಾರ್ಟಿ ಮಾಡಿಸಲೇ ಬೇಕು ಎಂಬ ಮಟ್ಟಿಗೆ ಎಣ್ಣೆ ಮಾರಾಟವಾಗುತ್ತಿದ್ದು ಬದುಕಿ ಬಾಳಬೇಕಾದ ಯುವಜನತೆ, ವಿದ್ಯಾರ್ಥಿಗಳೂ ದಿಕ್ಕು ತಪ್ಪುವಂತಾಗಿದೆ. ದೊಡ್ಡವರಾದಿಯಾಗಿ 16-17 ವರ್ಷದ ಮಕ್ಕಳು ಕುಡಿಯಲು ಪ್ರಾರಂಭಿಸಿದ್ದು, ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಎಣ್ಣೆ ಮಾರುವವರಿಗೆ ಸಾರ್ವಜನಿಕರು, ಮಹಿಳೆಯರು ಎಣ್ಣೆ ಮಾರಕೂಡದು. ಮಾರಿರೆ ದೂರು ನೀಡುತ್ತೇವೆಂದು ಹೆದರಿಸಿದರೂ ಮಾರಾಟಗಾರರು ಯಾರಿಗೆ ದೂರು ನೀಡುತ್ತೀರೋ ನೀಡಿ. ನಾವು ಎಲ್ಲ ಅಧಿಕಾರಿಗಳನ್ನು ಸರಿಮಾಡಿಕೊಂಡೇ ವ್ಯಾಪಾರಕ್ಕೆ ಕೂತಿರೋದು ಎಂದು ದಬಾಯಿಸುವ ಬಗ್ಗೆಯೂ ಮಹಿಳಾ ಸಂಘದವರು ಹೇಳುತ್ತಿದ್ದಾರೆ. ಆದ್ದರಿಂದ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಯನ್ನು ನಿಲ್ಲಿಸುವ ಮೂಲಕ ಹಳ್ಳಿಗಳಲ್ಲಿನ ನೆಮ್ಮದಿ, ಯುವಜನತೆಯನ್ನು ರಕ್ಷಿಸಬೇಕೆಂದು ಮಹಿಳಾ ಸಂಘಟನೆಯ ಸಿದ್ದಗಂಗಮ್ಮ ಒತ್ತಾಯಿಸಿದ್ದಾರೆ.

ಕೋಟ್‌ 1

ಸರ್ಕಾರ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುವವರಿಗೆ ಒಂದು ರೀತಿ ರಕ್ಷಣೆ ಒದಗಿಸಿದಂತಿದೆ. ಹಳ್ಳಿಗಳಲ್ಲೇ ಮದ್ಯ ಯಾವಾಗಬೇಕಾದರೂ ಸಿಗುತ್ತಿರುವುದರಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಕುಡಿದ ಬರುವ ಪುರುಷರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕುಡಿತದ ಚಟ ಹೆಚ್ಚಾಗಿ ಯುವಕರ ಆರೋಗ್ಯ ಹಾಳಾಗುತ್ತಿದೆ. - ರಾಧಮ್ಮ, ಮಹಿಳಾ ಸಂಘ, ಹಳೇಪಾಳ್ಯ

ಕೋಟ್ 2

ನಗರ ಅಥವಾ ಹಳ್ಳಿಗಳಲ್ಲಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುವುದು ಅಪರಾಧವಾಗಿದ್ದು, ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ವಿಷಯ ನಮ್ಮ ಇಲಾಖೆಯ ಗಮನಕ್ಕೂ ಬಂದಿದೆ. ದೂರುಗಳು ಬಂದ ಕಡೆ ಭೇಟಿ ನೀಡಿ ಕೆಲ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕೇಸು ದಾಖಲಿಸಲಾಗಿದೆ. ಮುಂದೆಯೂ ಸಹ ದೂರುಗಳು ಬಂದಲ್ಲಿ ಅಂತಹವರ ವಿರುದ್ದ ಕ್ರಮಕೈಗೊಳ್ಳುತ್ತೇವೆ. – ವಿಜಯಕುಮಾರ್, ಅಬಕಾರಿ ಉಪ ಅಧೀಕ್ಷಕರು, ತಿಪಟೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಗ್ಗೂಡಿಸುವ ಕೆಲಸ ಮಾಡುವ ಗ್ರಾಮ ಅರಣ್ಯ ಸಮಿತಿಗಳು: ಎಂ.ಪಿ.ಆದರ್ಶ
ಬಸ್ಸಲ್ಲಿ ‘ವಾಂತಿ’ ನಾಟಕವಾಡಿ ಚಿನ್ನಾಭರಣ ದೋಚುವ ಕುಪ್ಪಂ ಗ್ಯಾಂಗ್ ಅರೆಸ್ಟ್