ಹೆಬ್ಬಾಳ ಫ್ಲೈಓವರ್‌ ಕೆಳಗೆ ಅಕ್ರಮ ಪಾರ್ಕಿಂಗ್‌

KannadaprabhaNewsNetwork |  
Published : Jul 14, 2026, 04:00 AM ISTUpdated : Jul 14, 2026, 09:51 AM IST
Hebbal Flyover

ಸಾರಾಂಶ

ವಾಹನ ಸಂಚಾರ ದಟ್ಟಣೆ ನಿವಾರಣೆಗೆಂದು ಹೆಬ್ಬಾಳದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆ, ಈಗಾಗಲೇ ಅತಿಕ್ರಮಣ ಮತ್ತು ಅಕ್ರಮ ಪಾರ್ಕಿಂಗ್ ತಾಣವಾಗಿ ಬದಲಾಗಿದೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮೀಪ ನಿರ್ಮಿಸಿರುವ ಬಸ್‌ ನಿಲ್ದಾಣ ಅಪಘಾತಕ್ಕೆ ಆಹ್ವಾನ ನೀಡುವಂತಿದೆ!

 ಬೆಂಗಳೂರು :  ವಾಹನ ಸಂಚಾರ ದಟ್ಟಣೆ ನಿವಾರಣೆಗೆಂದು ಹೆಬ್ಬಾಳದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆ, ಈಗಾಗಲೇ ಅತಿಕ್ರಮಣ ಮತ್ತು ಅಕ್ರಮ ಪಾರ್ಕಿಂಗ್ ತಾಣವಾಗಿ ಬದಲಾಗಿದೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮೀಪ ನಿರ್ಮಿಸಿರುವ ಬಸ್‌ ನಿಲ್ದಾಣ ಅಪಘಾತಕ್ಕೆ ಆಹ್ವಾನ ನೀಡುವಂತಿದೆ!

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟು ಎಸ್ಟೀಮ್‌ ಮಾಲ್‌ನಿಂದ ಬೆಂಗಳೂರು ಸಿಟಿಯನ್ನು ಪ್ರವೇಶಿಸಲು ಮತ್ತು ನಾಗವಾರದಿಂದ ಬರುವ ವಾಹನಗಳು ನೇರವಾಗಿ ಬಳ್ಳಾರಿ ರಸ್ತೆ ಪ್ರವೇಶಿಸಲು ಅನುಕೂಲವಾಗುವಂತೆ ಮೇಲ್ಸೇತುವೆಯನ್ನು ನಿರ್ಮಿಸಿ ಕಳೆದ ಆಗಸ್ಟ್‌ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಈ ಮೇಲ್ಸೇತುವೆ ಈಗ ವಾಹನ ಸವಾರರಿಗೆ ಇನ್ನಷ್ಟು ಕಿರಿಕಿರಿಯುಂಟು ಮಾಡುತ್ತಿದೆ. ಮೇಲ್ಸೇತುವೆಯ ಕೆಳಭಾಗ ಸಂಪೂರ್ಣವಾಗಿ ಅತಿಕ್ರಮಣಕ್ಕೆ ಒಳಗಾಗಿದ್ದು ಅಕ್ರಮ ಪಾರ್ಕಿಂಗ್‌ ತಾಣವಾಗಿ ಬದಲಾಗಿದೆ. ಇಲ್ಲಿ ನಿತ್ಯವೂ ಬೈಕ್‌, ಕಾರುಗಳು, ಮಿನಿ ಬಸ್‌ಗಳು, ಪಾಲಿಕೆಯ ಕಸದ ಲಾರಿಗಳು ಬಂದು ನಿಲ್ಲುತ್ತಿವೆ. ಕೆಲವು ವಾಹನಗಳು ವಾರಗಳು ಕಳೆದರೂ ನಿಂತ ಜಾಗದಿಂದ ಅಲುಗಾಡುತ್ತಿಲ್ಲ.

ಇನ್ನು ಎಸ್ಟೀಮ್‌ ಮಾಲ್‌ ಕಡೆಯಿಂದ ಕೆ.ಆರ್‌.ಪುರಂ, ನಾಗವಾರ ಕಡೆಯಿಂದ ಹೆಬ್ಬಾಳದ ಬರುವ ಬಿಎಂಟಿಸಿ ಬಸ್‌ಗಳು, ಕಾರುಗಳು ನೇರವಾಗಿ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಮುಂಭಾಗವೇ ನಿಲ್ಲುವಂತೆ ಬಸ್‌ ನಿಲ್ದಾಣ ನಿರ್ಮಿಸಿರುವುದು ಟ್ರಾಫಿಕ್‌ ಸಮಸ್ಯೆ ಉಲ್ಭಣಗೊಳ್ಳುವುದಕ್ಕೆ ಪೂರಕವಾಗಿದೆ. ಇದರಿಂದ ನಿತ್ಯವೂ ಇಲ್ಲಿ ವಾಹನ ಸಂಚಾರ ದಟ್ಟಣೆಯ ಸಮಸ್ಯೆ ಎಲ್ಲೆ ಮೀರುತ್ತಿದೆ.

ಓಣಿಯಂತಿರುವ ಸರ್ವೀಸ್‌ ರಸ್ತೆ:

ಮೆಲ್ಸೇತುವೆ ಕೆಳಭಾಗದಲ್ಲಿರುವ ಸರ್ಕಲ್‌ (ರೈಲ್ವೆ ಹಳಿ ಸಮೀಪ) ಅನಧಿಕೃತವಾಗಿ ಬಿಎಂಟಿಸಿ ಬಸ್‌ಗಳ ತಂಗುದಾಣವಾಗಿ ಬಿಟ್ಟಿದೆ. ಸದ್ಯ ವಿಶ್ವನಾಥ್‌ ನಾಗೇನಹಳ್ಳಿ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ನಿತ್ಯವೂ ಟ್ರ್ಯಾಕ್ಟರ್‌ ಸೇರಿದಂತೆ ದೊಡ್ಡ ವಾಹನಗಳು ಇಲ್ಲಿ ಸಂಚರಿಸುತ್ತಿರುತ್ತವೆ. ಈ ಮಧ್ಯೆ ಪಾಲಿಕೆಗಳ ಕಸದ ಟಿಪ್ಪರ್‌ಗಳು, ಸಣ್ಣ ಟಿಪ್ಪರ್‌ಗಳು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತವೆ. ಮೆಲ್ಸೇತುವೆ ಕೆಳಭಾಗದಲ್ಲಿರುವ ಸರ್ಕಲ್‌ನಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ವರೆಗೆ ದಟ್ಟಣೆಯ ಅವಧಿಯಲ್ಲಿ ಪಾದಾಚಾರಿಗಳಂತೂ ಓಡಾಡುವುದು ನರಕದ ದರ್ಶನ ಮಾಡಿಸುತ್ತದೆ.

ಸಂಜಯನಗರ ಮುಖ್ಯ ರಸ್ತೆ ಕಾಮಗಾರಿ ಕಳೆದ 1.5 ವರ್ಷದಿಂದ ನಡೆಯುತ್ತಲೇ ಇದೆ. ಹಾಗಾಗಿ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳೆಲ್ಲ ಭೂಪಸಂದ್ರ ಮುಖ್ಯ ರಸ್ತೆಯಿಂದಲೇ ಓಡಾಡುತ್ತಿವೆ. ವಿಶ್ವನಾಥ ನಾಗೇನಹಳ್ಳಿ ಕಡೆಯಿಂದ ಬರುವ ವಾಹನಗಳು ಕೂಡ ಚೋಳನಾಯಕನ ಹಳ್ಳಿ ಮೂಲಕ ಮೇಲ್ಸೇತುವೆ ಕೆಳ ಭಾಗದ ಸರ್ವೀಸ್‌ ರಸ್ತೆಗೆ ಸೇರುತ್ತಿವೆ. ಹೀಗಾಗಿ ನಿತ್ಯವೂ ವಾಹನ ದಟ್ಟಣೆ ಇಲ್ಲಿ ಸಾಮಾನ್ಯ.

ಹೆಬ್ಬಾಳದಿಂದ ಸಂಜಯನಗರ, ಭೂಪಸಂದ್ರ ಮಾರ್ಗವಾಗಿ ಔಟರ್‌ ರಿಂಗ್‌ ರಸ್ತೆಗೆ ಹೋಗುವ ವಾಹನಗಳು ಬ್ಯಾಪ್ಟಿಸ್ಟ್‌ ಆಸ್ಪತ್ರೆ ಮಾರ್ಗವಾಗಿಯೇ ಇದೇ ಸರ್ವೀಸ್‌ ರಸ್ತೆಯಲ್ಲಿ ಬರಬೇಕು. ಇಕ್ಕಟ್ಟಾದ ಓಣಿಯಂತಿರುವ ಈ ಸರ್ವೀಸ್‌ ರಸ್ತೆ, ದ್ವಿಮುಖ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರು ಕೇವಲ 200 ಮೀ. ಸಂಚರಿಸಲು 10-15 ನಿಮಿಷ ಸರ್ಕಸ್‌ ಮಾಡಬೇಕಾಗಿದೆ.

ಕಂಡೂ ಕಾಣದಂತಿರುವ ಸಂಚಾರಿ ಪೊಲೀಸರು: 

ಬೆಳಗ್ಗೆ 8 ರಿಂದ 9 ಗಂಟೆವರೆಗೆ ಮಾತ್ರ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಸ್‌ ನಿಲ್ದಾಣದ ಸಮೀಪ ಸಂಚಾರಿ ಪೊಲೀಸರು ಇಲ್ಲವೇ ಗೃಹ ರಕ್ಷಕ ಒಂದಿಬ್ಬರು ಸಿಬ್ಬಂದಿ ನಿಂತಿರುತ್ತಾರೆ. ಆ ನಂತರ ಕೇಳುವವರೇ ಇರುವುದಿಲ್ಲ. ಇಕ್ಕಟ್ಟಾದ ರಸ್ತೆಯಲ್ಲಿ ಸ್ಕೂಲ್‌ ಬಸ್‌, ವ್ಯಾನ್‌ಗಳು, ಕಸದ ಲಾರಿಗಳು, ರಸ್ತೆ ಕಾಮಗಾರಿ ಟಿಪ್ಪರ್‌, ಮಕ್ಕಳನ್ನು ಸ್ಕೂಲ್‌ಗಳಿಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗಲು ಒದ್ದಾಡುವ ಪೋಷಕರು, ಮೇಲ್ಸೇತುವೆ ಕೆಳ ಭಾಗದ ಈ ಅನಧಿಕೃತ ಪಾರ್ಕಿಂಗ್‌ನಿಂದ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮೀಪದ ಬಸ್‌ ನಿಲ್ದಾಣ ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಈ ನಡುವೆ ಇಲ್ಲೊಂದು ಆಟೋ ನಿಲ್ದಾಣ ಕೂಡ ರಾತ್ರೋರಾತ್ರಿ ಶುರುವಾಗಿದ್ದು, ಟ್ರಾಫಿಕ್‌ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆ
ಸಮಾಜದಲ್ಲಿ ಅಸಮಾನತೆ, ಅಂಧಕಾರ ದೂರವಾಗಲಿ