ಎನ್. ನಾಗೇಂದ್ರ ಸ್ವಾಮಿ
ನಗರಸಭೆ ಅಧಿಕಾರಿಗಳು ಆದೇಶ ನೀಡುವುದು ಒಂದಾದರೇ, ಇಲ್ಲಿನ ಇಬ್ಬರು ನೌಕರರು ಮಾಡುವುದು ಇನ್ನೊಂದು. ನೆಲ ಶುಲ್ಕ, ಬಸ್ ಶುಲ್ಕ ವಸೂಲಿಗೆ ನೇಮಕಗೊಂಡ ಇಬ್ಬರು ನೌಕರರು ತಾವು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಬೇನಾಮಿ ವ್ಯಕ್ತಿಗಳನ್ನು ನೇಮಿಸಿಕೊಂಡು ಅವರಿಂದ ಶುಲ್ಕ ವಸೂಲಿ ಮಾಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.ನೆಲ ಶುಲ್ಕ ವಸೂಲಿ, ಬಸ್ ನಿಲ್ದಾಣದಲ್ಲಿ ಬಸ್ ಶುಲ್ಕ ವಸೂಲಿಗಾಗಿ ಡಿ-ಗ್ರೂಪ್ ನೌಕರ ಪ್ರಭಾಕರ್, ಮತ್ತೋರ್ವ ಶುಲ್ಕ ವಸೂಲಿಗಾರ ನಂಜುಂಡ ಶೆಟ್ಟಿ ಎಂಬ ಇಬ್ಬರನ್ನು ನೇಮಿಸಿ ನಗರಸಭೆ ಆಯುಕ್ತ ರುದ್ರಮ್ಮ ಶರಣಯ್ಯ ನೇಮಕಗೊಳಿಸಿದ್ದಾರೆ.
ಆಯುಕ್ತರ ನಿರ್ದೇಶನಕ್ಕೆ ಗೌರವ ನೀಡಬೇಕಾದ ನೌಕರರು, ತಾವು ರಂಗೋಲಿ ಕೆಳಗೆ ತೂರಿ ಕರ ವಸೂಲಿಗಾಗಿ ವಾಮ ಮಾರ್ಗ ಹಿಡಿದಿದ್ದು, ಶುಲ್ಕ ವಸೂಲಿಗಾಗಿ ಇಬ್ಬರು ಅನಧಿಕೃತ ವ್ಯಕ್ತಿಗಳನ್ನು ತಾವೇ ನೇಮಿಸಿಕೊಂಡು ಅವರಿಂದ ಶುಲ್ಕ ವಸೂಲಿ ಮಾಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆ ಬೇನಾಮಿ ವ್ಯಕ್ತಿಗಳಿಬ್ಬರು ಕರ ವಸೂಲಿ ವೇಳೆ ಸಂಬಂಧಿಸಿದ ನೌಕರರ ಸಹಿ ಇಲ್ಲದೇ, ಅನ್ಯರ ಸಹಿ ಇರುವ ರಶೀದಿಯನ್ನು ವಿತರಿಸಿ ಶುಲ್ಕ ಪಡೆಯುತ್ತಿದ್ದಾರೆ. ಇದರಿಂದಾಗಿ ನಗರಸಭೆ ಆದಾಯ ಸೋರಿಕೆಗೂ ಕಾರಣವಾಗಬಹುದು ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ರಶೀದಿಯಲ್ಲಿ ಸಂಬಂಧಿಸಿ ನೌಕರರ ಸಹಿ ಇಲ್ಲದಿರುವುದು, ಅನಧಿಕೃತ ವ್ಯಕ್ತಿಗಳು ವಸೂಲಿ ಮಾಡುತ್ತಿರುವ ಕುರಿತು ಜಾಲತಾಣಗಳಲ್ಲಿ ಪೋಟೊಗಳು ಸಹ ವೈರಲ್ ಆಗಿದ್ದು, ಈ ವಿಚಾರ ಸಾಕಷ್ಟು ಸದ್ದು ಮಾಡಿದೆ. ಅಲ್ಲದೇ, ಡಿ-ಗ್ರೂಪ್ ನೌಕರರಿಗೆ ಜವಾಬ್ದಾರಿ ವಹಿಸುವಂತಿಲ್ಲ ಎಂಬ ಜಿಲ್ಲಾಧಿಕಾರಿಗಳ ಆದೇಶವೂ ಇಲ್ಲಿ ಉಲ್ಲಂಘನೆಯಾಗಿದ್ದು, ಇನ್ನಾದರೂ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸುವರೇ ಕಾದು ನೋಡಬೇಕಿದೆ.---
ನಗರಸಭೆ ನೌಕರನ ಕೆಲಸವನ್ನು ಬೇನಾಯಿ ವ್ಯಕ್ತಿ ನಿರ್ವಹಿಸುತ್ತಿರುವುದು.