ಪೊನ್ನಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಒಳಪಟ್ಟ ಹನುಮಂತ ಬೆಟ್ಟದಲ್ಲಿ ಪರಿಸರಕ್ಕೆ ಮಾರಕವಾಗುವ ರೆಸಾರ್ಟ್ ಚಟುವಟಿಕೆ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿಗಳು ತಡೆಗಟ್ಟಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಪೊನ್ನಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಒಳಪಟ್ಟ ಹನುಮಂತ ಬೆಟ್ಟದಲ್ಲಿ ಪರಿಸರಕ್ಕೆ ಮಾರಕವಾಗುವ ರೆಸಾರ್ಟ್ ಚಟುವಟಿಕೆ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿಗಳು ತಡೆಗಟ್ಟಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಶ್ರೀಮಂಗಲದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಈ ವಿಚಾರವಾಗಿ ಗಂಭೀರ ಆರೋಪಗಳನ್ನು ಮಾಡಿ, ಗ್ರಾಮಕ್ಕೆ ಸಮಸ್ಯೆ ಆಗಬಲ್ಲ ರೆಸಾರ್ಟ್ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಗ್ರಾಮಸ್ಥ ಕುಪ್ಪಂಡ ಬೋಪಣ್ಣ ಮಾತನಾಡಿ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಬ್ರಹ್ಮಗಿರಿ ಅರಣ್ಯದ ಕೇವಲ 50 ಮೀಟರ್ ಅಂತರದಲ್ಲಿ ಅಕ್ರಮ ರೆಸಾರ್ಟ್ ಚಟುವಟಿಕೆ ನಡೆಯುತ್ತಿದೆ. ಈ ಬೆಳವಾಣಿಗೆ ಸ್ಥಳೀಯ ನಿವಾಸಿಗಳಿಗೆ ಮತ್ತು ವನ್ಯಜೀವಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಕಳೆದ ಎರಡು ತಿಂಗಳ ಹಿಂದೆ ಅರಣ್ಯ, ಕಂದಾಯ, ಪ್ರವಾಸೋದ್ಯಮ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ಬೆಳವಣಿಗೆಯಾಗಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆಯಲಿದ್ದಾರೆ ಎಂದು ಎಚ್ಚರಿಸಿದ್ದರು.
ಪರಿಸರ ಪ್ರೇಮಿ, ಕೆ.ಎನ್. ಬೋಸ್ ಮಾದಪ್ಪ ಮಾತನಾಡಿ, ಬ್ರಹ್ಮಗಿರಿ ಬೆಟ್ಟದ ಮೇಲೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯದೆ, ಅಕ್ರಮವಾಗಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲಾಗುತ್ತಿದೆ. ಈ ಪ್ರದೇಶವು ವನ್ಯಜೀವಿ ಧಾಮದ ಅತೀ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೊಳಪಡುವುದರಿಂದ ಹಾಗೂ ಪಶ್ಚಿಮಘಟ್ಟ ಬೆಟ್ಟಗಳ ಸಾಲುಗಳು ಭೂಕುಸಿತವಾಗುವ ಅತೀ ಸೂಕ್ಷ್ಮ ಪ್ರದೇಶದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಗ್ರಾಮಸ್ಥರ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ್ದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ನಿರಾಪೇಕ್ಷಣಾ ಪತ್ರ ನೀಡಿದ ಅಧಿಕಾರಿಗಳು ಅನಾಹುತವಾಗುವ ಹೊಣೆಯನ್ನು ಹೊರಬೇಕಾಗುತ್ತದೆ ಎಂದರು.
ಶ್ರೀಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಅಜ್ಜಮಾಡ ಜಯ, ಗ್ರಾಮಸ್ಥರಾದ ಅಜ್ಜಮಾಡ ಅಜಿತ್, ಅಜ್ಜಮಾಡ ಬೋಪಣ್ಣ, ಅಜ್ಜಮಾಡ ಮೋಹನ್ ಅಜ್ಜಮಾಡ ಪ್ರಮೋದ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.