ಖಾದಿ ಬೋರ್ಡ್‌ನ 5 ಕೋಟಿ ರು. ಆಸ್ತಿ ಅಕ್ರಮ ಮಾರಾಟ

KannadaprabhaNewsNetwork |  
Published : Jun 15, 2026, 02:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಕಟ್ಟಡ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದ ಸುಮಾರು 5 ಕೋಟಿ ರು. ಮೌಲ್ಯದ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಠಿಸಿ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ.

ಆಸ್ತಿಯ ವಸ್ತುಸ್ಥಿತಿ ಮರೆ ಮಾಚಿ ಕಡಿಮೆ ಮಾರುಕಟ್ಟೆ ಬೆಲೆ ತೋರಿಸಿ ಕ್ರಯ ಪತ್ರ ಅಂಗೀಕರಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಹಿಂದಿನ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಅವರ ಮಾರ್ಗದರ್ಶನದಂತೆ ಎಲ್ಲ ನಡೆದಿದೆ ಎಂಬುದು ಸಹಕಾರ ಸಂಘದ ಷೇರುದಾರ ನಿಬಗೂರು ಗ್ರಾಮದ ಎಸ್.ಕೆ.ಮಹಸ್ವಾಮಿ ಅವರ ಆರೋಪ.

ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಎಸ್‌ಆರ್ ಟಿಸಿ ಎದುರಿಗೆ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದ ಆಸ್ತಿಯಿದೆ. ಒಟ್ಟು 1393 ಚ.ಮೀ ನಷ್ಟು ವಿಸ್ತೃತವಾಗಿ ಹರಡಿಕೊಂಡಿರುವ ಕಟ್ಟಡಕ್ಕೆ ಬೇಕಾಬಿಟ್ಟಿಯಾಗಿ ಕಿಮ್ಮತ್ತು ಕಟ್ಟಿ ವಿಲೇ ಮಾಡಲಾಗಿದೆ. ವಾಣಿಜ್ಯ ಉಪಯೋಗದ ಸ್ಥಿರ ಸೊತ್ತನ್ನು ಸಂಘದ ಅಧ್ಯಕ್ಷ ಮೋಕ್ಷಪ್ಪ, ಭರಮಸಾಗರ ಗ್ರಾಪಂ ಪಿಡಿಒ ಟಿ.ವೀರೇಶ್ ಎಂಬುವರು ಹಿಂದಿನ ಸಬ್ ರಿಜಿಸ್ಟ್ರಾರ್ ತುಳಸಿ ಲಕ್ಷ್ಮಿ ಮಾರ್ಗದರ್ಶನದಂತೆ ಹರಾಜು ಮೂಲಕ ವಿಲೇ ಪಡಿಸಿದ್ದಾರೆ.

ಸಂಘದ ಕವಾಡಿಗರಹಟ್ಟಿ ಖಾದಿ ಕೇಂದ್ರದಲ್ಲಿ ಫೆಬ್ರವರಿ 2-3023 ರಂದು ಆಸ್ತಿ ವಿಲೇವಾರಿಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಸಹಕಾರ ಸಂಘದ ಉಪ ನಿಬಂಧಕರು, ಬಿಡ್ ದಾರರಾದ ಎಚ್.ಎನ್.ತಿಪ್ಪೇಸ್ವಾಮಿ, ಎಚ್.ಜಿ.ಸಂತೋಷ್ ಕುಮಾರ್, ಎಚ್.ಎಂ.ಶಿವಕುಮಾರ್, ಕೆ.ಜಯಪ್ಪ ಎಂಬುವರು ಬಿಡ್‌ನಲ್ಲಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಇಬ್ಬರು ನಿರ್ದೇಶಕರು ಹಾಗೂ ಮತ್ತೊಬ್ಬ ಬಿಡ್ ದಾರರಾದ ಅಹ್ಮದ್ ಬೆಣಕಲ್ ಗೈರು ಹಾಜರಾಗಿರುತ್ತಾರೆ. ಇವರ ಅನುಪಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆ ನಡೆದು ಶಿವಲಿಂಗಪ್ಪ ಎಂಬುವರಿಗೆ 67.80 ಲಕ್ಷಕ್ಕೆ ಬಿಡ್ ಆಗಿದೆ.

ಹರಾಜು ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿಲ್ಲವೆಂದು ಸಹಕಾರ ಸಂಘಗಳ ಉಪ ನಿಬಂಧಕರು ಫೆಬ್ರವರಿ 6-2023ರಂದು ಪತ್ರ ಬರೆದು ಹರಾಜು ಪ್ರಕ್ರಿಯೆಗೆ ಸಮ್ಮತಿ ವ್ಯಕ್ತಪಡಿಸಿಲ್ಲ. ಅಲ್ಲದೇ ಹರಾಜ ಪ್ರಕ್ರಿಯೆಯ ರದ್ದು ಪಡಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಏಪ್ರಿಲ್‌ 17-2023 ರಂದು ಐದು ವರ್ಷದ ಅವಧಿಗೆ ಎಚ್.ಎನ್.ತಿಪ್ಪೇಸ್ವಾಮಿ ಎಂಬುವರಿಗೆ ಬೋಗ್ಯ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದ ಹೆಸರಿನಲ್ಲಿದ್ದ ವಾಣಿಜ್ಯೋಪಯೋಗದ ಕಟ್ಟಡ ಮತ್ತು ಖಾಲಿ ನಿವೇಶವ ಸ್ವತ್ತಿನ ಮೂಲ ಸ್ವರೂಪ ಬದಲಾಯಿಸಿ ವಾಸೋಪಯೋಗಿಯ ಖಾಲಿ ನಿವೇಶನವೆಂದು ದಾಖಲಿಸಲಾಗಿದೆ. 5 ಕೋಟಿ ರು. ಮೌಲ್ಯದ ವಾಣಿಜ್ಯೋಪಯೋಗಿ ಕಟ್ಟಡ ಹಾಗೂ ನಿವೇಶನವನ್ನು ಕೇವಲ 40 ಲಕ್ಷ ರು. ಕ್ರಯಪತ್ರ ರಿಜಿಸ್ಟರ್ ಮಾಡಲಾಗಿದ್ದು ಈ ಎಲ್ಲ ಕಾನೂನು ಬಾಹಿರ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟಿರುವ ಹಿಂದಿನ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ, ಪಿಡಿಒ ವೀರೇಶ್ ಮತ್ತು ಸಂಘದ ಅಧ್ಯಕ್ಷ ಮೋಕ್ಷಪ್ಪ ಹಾಗೂ ರಿಜಿಸ್ಟರ್ ಮಾಡಿಸಿಕೊಂಡಿರುವ ಎಚ್.ಎನ್.ತಿಪ್ಪೇಸ್ವಾಮಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಷೇರುದಾರ ಮಹಸ್ವಾಮಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಮೂಲಗಳಲಿಲ್ಲದ ರೈತರ ಬದುಕು ಬರಡು
ಮಣ್ಣಿನ ಸಂರಕ್ಷಣೆಯಿಂದ ಅನ್ನದ ಭದ್ರತೆ ಖಾತ್ರಿ