ತುಂಗಭದ್ರಾ ನದಿ ಒಡಲಲ್ಲಿ ಮರ್ರಂ ಅಕ್ರಮ

KannadaprabhaNewsNetwork |  
Published : May 24, 2026, 02:15 AM IST
23ಕೆಪಿಎಲ್26 ಅಕ್ರಮವಾಗಿ ಸಂಗ್ರಹಿಸಿರುವ ಮರ್ರಂ | Kannada Prabha

ಸಾರಾಂಶ

ತುಂಗಭದ್ರಾ ನದಿಯ ದಡದಲ್ಲಿಯೇ ಅಕ್ರಮವಾಗಿ ಮರ್ರಂ ಗಣಿಗಾರಿಕೆ ನಡೆಸಿ ಸಾವಿರಾರು ಟ್ರ್ಯಾಕ್ಟರ್ ಗೂ ಅಧಿಕ ಸಂಗ್ರಹಿಸಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ತುಂಗಭದ್ರಾ ನದಿಯ ಒಡಲಲ್ಲಿ ಇದುವರೆಗೂ ಮರಳು ಅಕ್ರಮ ದಂಧೆ ನಡೆಯುತ್ತಿತ್ತು. ಈಗ ಮರ್ರಂ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ತುಂಗಭದ್ರಾ ಕಾಡಾ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಶನಿವಾರ ಹಠಾತ್ ಭೇಟಿ ನೀಡಿದಾಗ ಸಾವಿರಾರು ಟ್ರ್ಯಾಕ್ಟರ್ ಮರ್ರಂ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶವಾಗಿರುವ ನೀರಲಗಿ ಗ್ರಾಮದ ಬಳಿ ತುಂಗಭದ್ರಾ ನದಿಯ ದಡದಲ್ಲಿಯೇ ಅಕ್ರಮವಾಗಿ ಮರ್ರಂ ಗಣಿಗಾರಿಕೆ ನಡೆಸಿ ಸಾವಿರಾರು ಟ್ರ್ಯಾಕ್ಟರ್ ಗೂ ಅಧಿಕ ಸಂಗ್ರಹಿಸಿದ್ದಾರೆ.

ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ, ರಾಜಸ್ವ ಸಹ ಪಾವತಿ ಮಾಡಿಲ್ಲ. ಅಕ್ರಮವಾಗಿಯೇ ರಾತ್ರೋರಾತ್ರಿ ಇಟ್ಟಂಗಿ ಭಟ್ಟಿಗೆ ಮರ್ರಂ ಸಾಗಿಸುವ ದೊಡ್ಡ ಷಡ್ಯಂತ್ರ ಇದರಲ್ಲಿ ಅಡಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಮುಳುಗಡೆ ಪ್ರದೇಶದಲ್ಲಿ ಈ ಅಕ್ರಮ ನಡೆಸಲಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಬೆಂಬಲ ಇಲ್ಲದೇ ಮಾಡಲು ಸಾಧ್ಯವೇ ಇಲ್ಲ. ಯಾರದೋ ಕೈವಾಡ ಇರುವುದರಿಂದಲೇ ಇಷ್ಟೊಂದು ರಾಜಾರೋಷವಾಗಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಮಗ್ರ ತನಿಖೆಯಾಗಲಿ: ಅಚ್ಚರಿ ಎಂದರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮತ್ತು ತುಂಗಭದ್ರಾ ಕಾಡಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಾವಿರಾರು ಟ್ರ್ಯಾಕ್ಟರ್ ಮರ್ರಂ ಸೀಜ್ ಮಾಡಿದ್ದರೂ ಸಹ ಯಾರೂ ಇದು ನಮ್ಮದು ಎಂದು ಮುಂದೆ ಬಂದಿಲ್ಲ. ಹೀಗಾಗಿ, ಈ ಕುರಿತು ಸಮಗ್ರ ತನಿಖೆಯಾಗಬೇಕು. ಈ ಅಕ್ರಮ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮವಾಗಬೇಕು. ಯಾರು ಎನ್ನುವುದು ನೀರಲಗಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಮಾಹಿತಿ ಇದ್ದು, ಗೌಪ್ಯವಾಗಿ ಮಾಹಿತಿ ಪಡೆದು ತಪ್ಪಿತಸ್ಥರ ಜಾಲಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳಗೆ ಮೌಖಿಕವಾಗಿ ದೂರು ಸಲ್ಲಿಸಿ ದಾಖಲೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಮೇಲೆ ಅಕ್ರಮದ ಬಣ್ಣ ಬಯಲಾಗಿದೆ.

ಲೂಟಿ ಮಾಡುವ ಸಾಧ್ಯತೆ: ಈಗಾಗಲೇ ರಾತ್ರೋರಾತ್ರಿ ಸಾಕಷ್ಟು ಮರ್ರಂ ಸಾಗಾಟ ಮಾಡಿದ್ದಾರೆ. ನಿತ್ಯ ರಾತ್ರಿ ಹತ್ತು ಗಂಟೆಯ ನಂತರ ಕಾರ್ಯಾಚರಣೆ ಮಾಡುತ್ತಾರೆ. ಈಗಲೂ ಸೀಜ್ ಮಾಡಿರುವ ಸಾವಿರಾರು ಟ್ರ್ಯಾಕ್ಟರ್ ಮರ್ರಂ ಸಹ ರಾತ್ರೋರಾತ್ರಿ ಲೂಟಿ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಈ ಬಗ್ಗೆ ವಿಶೇಷ ನಿಗಾ ಇರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಪ್ರಕರಣ ದಾಖಲು: ಅಕ್ರಮ ಮರ್ರಂ ದಂಧೆ ಪತ್ತೆ ಮಾಡಿರುವ ಅಧಿಕಾರಿಗಳು ಮರ್ರಂ ಸೀಜ್ ಮಾಡಿದ್ದು, ಈಗ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತುಂಗಭದ್ರಾ ಕಾಡಾ ಕಚೇರಿಯ ಅಧಿಕಾರಿಗಳು ಶನಿವಾರ ಅನಾಮಧೇಯ ವ್ಯಕ್ತಿಗಳ ಮೇಲೆ ಎಂದು ಪ್ರಕರಣ ದಾಖಲಿಸಿದೆ ಎನ್ನುವ ಮಾಹಿತಿ ಗೊತ್ತಾಗಿದೆ.

ನೀರಲಗಿ ಬಳಿ ತುಂಗಭದ್ರಾ ನದಿಯ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ರಮ ಮರ್ರಂ ಗಣಿಗಾರಿಕೆ ಮಾಡಿದ್ದ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿ ಸೀಜ್ ಮಾಡಲಾಗಿದೆ. ಇದು ತುಂಗಭದ್ರಾ ಕಾಡಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವ್ಯಾಪ್ತಿಗೆ ಬರುವುದರಿಂದ ಕಾನೂನು ಕ್ರಮ ವಹಿಸುತ್ತಾರೆ ಎಂದು ಕೊಪ್ಪಳ ತಹಸೀಲ್ದಾರ ಬಸವರಾಜ ಚನ್ನಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರಿ ಬಿಸಿಲು ಲೆಕ್ಕಿಸದೆ ಅಂಜನಾದ್ರಿಗೆ ಅಪಾರ ಭಕ್ತಗಣ
ಗುಡಿಗೇರಿ ಗ್ರಾಮಕ್ಕೆ ಅಧಿಕಾರಿಗಳ ದೌಡು, ಟ್ಯಾಂಕರ್ ಮೂಲಕ ನೀರು ಪೂರೈಕೆ