- ಮೌನ ವಹಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳು: ಜನರ ಆಕ್ರೋಶ
- ಮರಳನ್ನು ಅಕ್ರಮವಾಗಿ ಫಿಲ್ಟರ್ ಮಾಡಿ ಸಾಗಿಸಲಾಗುತ್ತಿದೆಎಂ.ಕೆ.ಹರಿಚರಣತಿಲಕ್ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ನದಿ ದಡದ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಎಗ್ಗಿಲ್ಲದೇ ಮರಳುದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನಲ್ಲಿ ಹರಿಯುವ ಹೇಮಾವತಿ ನದಿ ದಡದಲ್ಲಿ ಬರುವ ಮಂದಗೆರೆಯಿಂದ ಆರಂಭವಾಗುವ ಅಕ್ರಮ ಮರಳುಗಾರಿಕೆ ಹೇಮಾವತಿ (ಕೆ.ಆರ್.ಎಸ್) ಹಿನ್ನೀರಿನವರೆಗೂ ನದಿ ತೀರದಲ್ಲಿನ ಗ್ರಾಮಗಳ ವ್ಯಾಪ್ತಿವರೆಗೆಗೂ ನಡೆಯುತ್ತಿದೆ. ಎಗ್ಗಿಲ್ಲದೇ ನದಿ ತೀರದ ಸಾಕಷ್ಟು ಪ್ರದೇಶಗಳಲ್ಲಿ ಭೂಮಿಯೊಳಗಿನ ಮರಳಿನ ನಿಕ್ಷೇಪಗಳನ್ನು ಅಕ್ರಮವಾಗಿ ಹೊರತೆಗೆಯಲಾಗುತ್ತಿದೆ.
ಹಲವು ವರ್ಷಗಳಿಂದ ಭೂಗರ್ಭದಲ್ಲಿರುವ ಮರಳನ್ನು ತೆಗೆದು ಸಾಗಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮರಳನ್ನು ಸಾಗಿಸಲು ದಾರಿಗಳಿಗೂ ಹಣ ನೀಡಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಕೆಲ ರಾಜಕಾರಣಿಗಳು, ಅಧಿಕಾರಿಗಳ ಕೃಪಾಕಟಾಕ್ಷವು ಇದೆ. ಇದರಿಂದ ದಂಧೆಕೋರರ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.ತಾಲೂಕಿನ ಗದ್ದೆಹೊಸೂರು, ನಾಟನಹಳ್ಳಿ, ಬಂಡಿಹೊಳೆ, ಮಾಕವಳ್ಳಿ, ಹೆಗ್ಗಡಹಳ್ಳಿ, ಅಕ್ಕಿಹೆಬ್ಬಾಳು, ದಡದಹಳ್ಳಿ, ಆಲಂಬಾಡಿ, ಮಡುವಿನಕೋಡಿ, ಸೋಮನಾಥಪುರ, ಕಟ್ಟೆಕ್ಯಾತನಹಳ್ಳಿ, ಬೆಳತೂರು, ಅಂಬಿಗರಹಳ್ಳಿ, ಪುರ, ಸೋಮನಹಳ್ಳಿ ಸೇರಿದಂತೆ ಹೇಮಾವತಿ (ಕೆ.ಆರ್.ಎಸ್) ಹಿನ್ನೀರಿನವರೆಗೂ ನದಿ ತೀರದಲ್ಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಕೂಡಲೇ ನದಿ ತಂದು ಬಿಟ್ಟಿರುವ ಮರಳಿನ ರಾಶಿಗೆ ಕನ್ನ ಹಾಕಲು ಬಕಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ.ಅಕ್ರಮ ಫಿಲ್ಟರ್ ಮರಳು ದಂಧೆ:
ಕೃಷಿ ಭೂಮಿಯಲ್ಲಿರುವ ಮರಳನ್ನು ನೀರಿನಿಂದ ಫಿಲ್ಟರ್ ಮಾಡಿ ಪಟ್ಟಣ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ. ರಾಯಸಮುದ್ರ, ವಸಂತಪುರ, ಮೈಲನಹಳ್ಳಿ, ಮರುವನಹಳ್ಳಿ, ನೀತಿಮಂಗಲ, ವಸಂತಪುರ, ಸಿಂಧಘಟ್ಟ, ಕ್ಯಾತನಹಳ್ಳಿ, ಶೀರ್‌ಬಿಲ್ಲೇನಹಳ್ಳಿ, ರಾಜಘಟ್ಟ, ಸಾರಂಗಿ, ಕೈಗೋನಹಳ್ಳಿ, ಜಾಗಿನಕೆರೆ, ನಾಯಕನಹಳ್ಳಿ, ಸಂತೇಬಾಚಹಳ್ಳಿಯ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳನ್ನು ಫಿಲ್ಟರ್ ಮಾಡಿ ಸಾಗಿಸಲಾಗುತ್ತಿದೆ.ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಫಿಲ್ಟರ್ ಮರಳಿನಲ್ಲಿ ಮನೆ ನಿರ್ಮಿಸುವುದರಿಂದ ಮನೆಗಳಿಗೆ ಬಳಸಿದ ಕಬ್ಬಿಣ ತುಕ್ಕುಹಿಡಿದು ಹಾಳಾಗಲಿದೆ. ಕೋಟ್ಯಂತರ ರು. ಖರ್ಚುಮಾಡಿದ ಮನೆಗಳು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಫಿಲ್ಟರ್ ಮಾಡಿದ ನೀರನ್ನು ಕುಡಿದ ದನಕರುಗಳು ಕಾಯಿಲೆಗಳಿಗೆ ತುತ್ತಾಗುತ್ತಿವೆ. ಈ ಬಗ್ಗೆ ಹಲವು ಗ್ರಾಮಗಳ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದ್ದಾರೆ.
ಮರಳು ಲೂಟಿಕೋರರು ಅಧಿಕಾರಿಗಳನ್ನು ಕೈಗೆ ಹಾಕಿಕೊಂಡು ಮರಳುದಂಧೆ ನಡೆಸುತ್ತಿದ್ದರೂ ಪೊಲೀಸರಾಗಲಿ, ತಹಸೀಲ್ದಾರ್ ಆಗಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ ಮರಳುದಂಧೆಕೋರರನ್ನು ಹಿಡಿದು ಕಠಿಣ ಶಿಕ್ಷೆ ನೀಡದೆ ಇರುವುದು ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಹಾಲುಜೇನು ಸವಿದಂತಾಗಿದೆ.ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವುದು ಪೊಲೀಸರಿಗೆ ತಿಳಿದರೂ ಮಾಸಿಕವಾಗಿ ಇಂತಿಷ್ಟು ಹಣ ಪಡೆದು ಸುಮ್ಮನಿದ್ದಾರೆ ಎಂಬ ಆರೋಪಗಳಿವೆ. ಅಲ್ಲದೇ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಹಣ ಪಡೆದು ಮರಳುಗಣಿಗಾರಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಾಸಕರಿಗೆ ಮನವಿ:ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಿ ಕೆರೆಗಳನ್ನು ಸಂರಕ್ಷಿಸುವಂತೆ ತಹಸೀಲ್ದಾರ್ ಮತ್ತು ಶಾಸಕ ಎಚ್.ಟಿ.ಮಂಜು ಅವರಿಗೆ ಕಳೆದ ವಾರ ಲಿಖಿತ ದೂರು ನೀಡಿದ್ದರೂ ಅದು ಫಲಪ್ರದವಾಗಿಲ್ಲ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆಗಳು ಹಾಳಾಗುತ್ತಿವೆ. ಇದರ ಪರಿಣಾಮ ಕೆರೆ ಸುತ್ತಮುತ್ತಲ ರೈತರ ಕೃಷಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳು ಸ್ಥಗಿತಗೊಳ್ಳುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕೆ.ಆರ್.ಪೇಟೆ ತಾಲೂಕು ಕೂಡ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿದೆ. ಕ್ಷೇತ್ರದ ಶಾಸಕರು ಕ್ರಮ ಮರಳು ಗಣಿಗಾರಿಕೆ ಬಗ್ಗೆ ಧ್ವನಿಯೆತ್ತಿ ಅಧಿಕಾರಿಗಳನ್ನು ಎಚ್ಚರಿಸಬೇಕಾಗಿದೆ. ರೈತರ ಹಿತದೃಷ್ಟಿಯಿಂದ ನದಿ ದಡಗಳು ಮತ್ತು ಕೆರೆಗಳನ್ನು ಸಂರಕ್ಷಿಸಬೇಕಿದೆ.ಅಕ್ರಮ ಮರಳು ಗಣಿಗಾರಿಕೆ ಜೊತೆಗೆ ತಾಲೂಕಿನ ಕತ್ತರಘಟ್ಟ ಬಳಿ ಬೆಟ್ಟದ ಸಾಲಿನಲ್ಲಿ ಅಪರೂಪದ ಹಾಗೂ ಅಪಾರ ಬೆಲೆ ಬಾಳುವ ಬೆಣಚು ಕಲ್ಲಿನ ಗ್ರ್ಯಾನೇಟ್ ಗಣಿಗಾರಿಕೆಯೂ ಅಕ್ರಮವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಸ್ಥಳೀಯರೂ ಸಾಥ್ ನೀಡಿದ್ದು ಬೆಳ್ಳಿ ಬೆಟ್ಟದ ಸಾಲು ಕರಗುತ್ತಿದ್ದರೂ ಗಣಿ ಇಲಾಖೆ ಮತ್ತು ತಾಲೂಕು ಆಡಳಿತ ಗಾಡ ನಿದ್ರೆಯಲ್ಲಿದೆ ಎಂದು ಹೇಳಲಾಗಿದೆ.
--------------ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಅಕ್ರಮ ತಡೆಗೆ ಮುಂದಾಗಿದ್ದು, ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮರಳು ಗಣಿಗಾರಿಕೆ ಬಹುತೇಕ ರಾತ್ರಿ 12 ಗಂಟೆ ನಂತರ ನಡೆಯುತ್ತಿದೆ. ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಕಾರ ಪಡೆದು ಮರಳು ದಂಧೆ ನಿಲ್ಲಿಸಲು ಶ್ರಮಿಸುತ್ತೇನೆ.
- ನಿಸರ್ಗಪ್ರಿಯ, ತಹಸೀಲ್ದಾರ್-------------
ಗಣಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಪರಸ್ಪರ ಶಾಮೀಲಾಗಿ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಹಕಾರ ನೀಡುತ್ತಿವೆ. ಸ್ಥಳೀಯರೇ ಮರಳು ದಂಧೆ ಮಾಡುವುದರಿಂದ ಅವರನ್ನು ಎದುರಿಸಿ ನಿಲ್ಲಲು ಕೆಲವು ಕಡೆ ಗ್ರಾಮಸ್ಥರಿಗೆ ಸಾಧ್ಯವಾಗುತ್ತಿಲ್ಲ. ತಾಲೂಕು ಆಡಳಿತ, ಪೊಲೀಸ್ ಮತ್ತು ಗಣಿ ಇಲಾಖೆ ಬಿಗಿಯಾದ ಕ್ರಮ ವಹಿಸಬೇಕು. ಶಾಸಕರು ದಂಧೆಗೆ ಕುಮ್ಮಕ್ಕು ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು.- ಮರುವನಹಳ್ಳಿ ಶಂಕರ್ , ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರು.11ಕೆಎಂಎನ್ ಡಿ22,23,24,25
ಕೆ.ಆರ್ .ಪೇಟೆಯ ಕೆ.ಆರ್.ಎಸ್ ಹಿನ್ನೀರಿಗೆ ಹೊಂದಿಕೊಂಡಂತೆ ಹೇಮಾವತಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ.ಕೆ.ಆರ್.ಪೇಟೆ ತಾಲೂಕಿನ ಸಿಂಧುಘಟ್ಟ, ಕ್ಯಾತನಹಳ್ಳಿ ಮತ್ತು ರಾಯಸಮುದ್ರ ಕೆರೆಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ.
ಅಕ್ರಮ ಮರಳು ದಂಧೆಯಿಂದ ಗುಂಡಿಯಂತಾಗಿರುವ ಹೇಮಾವತಿ ನದಿ ತೀರ.