ಕನ್ನಡಪ್ರಭ ವಾರ್ತೆ ಯಾದಗಿರಿ
ಹಟ್ಟಿ ಚಿನ್ನದ ಗಣಿ ಹೆಸರಿನ ಅನುಮತಿ ಪತ್ರದಲ್ಲಿ ಖಾಸಗಿಯಾಗಿ ಮರಳು ಸಾಗಾಟ ನಡೆದಿದ್ದು, ದಂಧೆಕೋರರು ಸರ್ಕಾರಿ ಹೆಸರಲ್ಲಿ ಮರಳು ಲೂಟಿ ನಡೆಸಿದ್ದಾರೆಂದು ದೂರುಗಳು ಕೇಳಿಬರುತ್ತಿವೆ.
ಇನ್ನು, ಶಹಾಪುರ ತಾಲೂಕಿನ ಗೌಡೂರು ಭಾಗದಲ್ಲಿ ಕಳೆದ ಡಿ.1ರಂದು ಜಪ್ತಿ ಮಾಡಲಾಗಿದ್ದ ಸುಮಾರು 4.20 ಕೋಟಿ ರು.ಗಳ ಮೌಲ್ಯದ, 60 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನಿನ ಮೇಲೆ ಕಣ್ಣು ಬಿದ್ದಿದ್ದು, ಅಕ್ರಮ ಸಕ್ರಮಕ್ಕೆ ಸಂಚು ನಡೆದಿದೆ. ಹಂತ ಹಂತವಾಗಿ ದಾಸ್ತಾನನ್ನು ಬೇರೆಡೆ ಸಾಗಿಸಿ, ಮಾರಾಟ ಮಾಡುವ ಹುನ್ನಾರ ನಡೆದಿದೆ ಎಂದು "ಕನ್ನಡಪ್ರಭ "ಕ್ಕೆ ಬಲ್ಲ ಮೂಲಗಳು ತಿಳಿಸಿವೆ.ಅಕ್ರಮ ಮರಳು ಸಾಗಾಟ ತಡೆಯಬೇಕಾಗಿರುವ ಚೆಕ್ಪೋಸ್ಟ್‌ಗಳಲ್ಲಿ ಸಿಸಿಟಿವಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಉದ್ದೇಶಪೂರ್ವಕಾಗಿಯೇ ಇರದಂತೆ ನೋಡಿಕೊಂಡಿರುವ ಹಿಂದೆ, ಮರಳು ಮಾಫಿಯಾ ಕೈವಾಡ ಅಡಗಿರಬಹುದು ಎಂಬ ಶಂಕೆಯಿದೆ. ಹೀಗಾಗಿ, ಜಿಲ್ಲೆಯ ಗಡಿ ಭಾಗದಿಂದ ಮತ್ತೊಂದು ಜಿಲ್ಲೆಗೆ ಇದನ್ನು ಸಾಗಿಸಿದ ಕುರಿತು ಸಾಕ್ಷಿಗಳು ಸಿಗದಂತಾಗುತ್ತದೆ.
ಐಕೂರು ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಐಕೂರಿನಲ್ಲಿ ಡಿಆರ್ ವಾಹನ ನಿಲ್ಲಿಸಲಾಗಿದ್ದರೆ, ಗೊಂದೆನೂರಿನಲ್ಲಿ ಮರಳು ಅಕ್ರಮ ಸಾಗಾಟಕ್ಕೆ ರಸ್ತೆ ನಿರ್ಮಿಸಿದ್ದರಾದರೂ, ಪೊಲೀಸ್ ಬೀಟ್ ಹಾಕಿದ್ದು, ಅಕ್ರಮ ತಡೆಯುವಲ್ಲಿ ಮುಂದಾಗಿದ್ದಾರೆ.ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ಜಿಲ್ಲಾಡಳಿತ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಚೆಕ್ಪೋಸ್ಟ್ಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಡಾ. ಸುಶೀಲಾ, ಜಿಲ್ಲಾಧಿಕಾರಿ, ಯಾದಗಿರಿ