ಕನ್ನಡಪ್ರಭವಾರ್ತೆ ತುರುವೇಕೆರೆ
ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದರಿಂದ ಚಿಮ್ಮನಹಳ್ಳಿ, ಡಿ.ಶೆಟ್ಟಿಹಳ್ಳಿ, ಕುರುಬರಹಳ್ಳಿ, ಆಲದೇವರಹಟ್ಟಿ, ಚಿಕ್ಕ ಗೊರಾಘಟ್ಟ, ದೊಡ್ಡ ಗೊರಾಘಟ್ಟ ಮತ್ತು ಚಿಮ್ಮನಹಳ್ಳಿ ಕಾಲೋನಿ ಸೇರಿದಂತೆ ಹಲವಾರು ಗ್ರಾಮಗಳಿಗೆ ತೊಂದರೆಯಾಗಿದೆ ಎಂದು ದೂರು ನೀಡಲಾಗಿದೆ. ಕಳೆದ 20 ದಿನಗಳಿಂದಲೂ ಈ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಹತ್ತಾರು ಟ್ರ್ಯಾಕ್ಟರ್ ಗಳು, ಟಿಪ್ಪರ್ ಗಳು, ಜೆಸಿಬಿ ಸೇರಿದಂತೆ ಹತ್ತು ಹಲವಾರು ವಾಹನಗಳಲ್ಲಿ ಅಕ್ರಮವಾಗಿ ಮಣ್ಣನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವವರು ಹೇಮಾವತಿ ಡಿ.10 ನಾಲೆಗೆ ಅಡ್ಡಲಾಗಿ ದಾರಿ ನಿರ್ಮಿಸಲು ನಾಲೆಗೆ ಮಣ್ಣು ಸುರಿದು ನಾಲೆ ಮುಚ್ಚಿದ್ದಾರೆ. ಚಿಕ್ಕಗೊರಾಘಟ್ಟದಿಂದ ಸುಕ್ಷೇತ್ರ ಮುನೀಶ್ವರಸ್ವಾಮಿ ದೇವಾಲಯ, ದೊಡ್ಡಗೊರಾಘಟ್ಟದಿಂದ ಚಿಮ್ಮನಹಳ್ಳಿಯ ವಡ್ಡರಕಟ್ಟೆಯವರೆಗೆ, ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ರಸ್ತೆಗಳು ಸಂಪೂರ್ಣ ಹಾಳಾಗಿದೆ. ರಸ್ತೆಯ ಅಕ್ಕಪಕ್ಕದ ಮನೆಗಳು, ಶಾಲೆಗಳು ಮತ್ತು ದೇವಾಲಯಗಳಿಗೆ ಹಾನಿಯಾಗಿದೆ. ನಿರಂತರವಾಗಿ ವಾಹನಗಳು ಮಣ್ಣು ಸಾಗಾಟ ಮಾಡುತ್ತಿರುವುದರಿಂದ ಭಾರಿ ಧೂಳಿನಿಂದ ಕಟಾವಿಗೆ ಬಂದಿರುವ ಬೆಳೆಗಳಿಗೆ ತೊಂದರೆಯಾಗಿದೆ. ಸಾವಿರಾರು ಲೋಡು ಮಣ್ಣನ್ನು ಕಳವು ಮಾಡಿರುವುದರಿಂದ ಸರ್ಕಾರಕ್ಕೆ ಲಕ್ಷಾಂತರ ರು. ರಾಜಸ್ವ ನಷ್ಠವಾಗಿದೆ. ಧೂಳಿನಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹಲವಾರು ಮಂದಿಗೆ ಜ್ವರ, ಕೆಮ್ಮು, ಅಸ್ತಮಾ ಸೇರಿದಂತೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದೆ. ನಾಲೆಗೆ ಅಡ್ಡಲಾಗಿ ರಸ್ತೆ ನಿರ್ಮಿಸಿರುವುದರಿಂದ ಭೂಕುಸಿತ ಆಗುವ ಸಾಧ್ಯತೆ ಇದೆ. ಅರಣ್ಯ ಭೂ ಪ್ರದೇಶದಲ್ಲಿ ಸುಮಾರು 10 ಮೀಟರ್ ನಷ್ಟು ಆಳದಷ್ಟು ಮಣ್ಣನ್ನು ತೆಗೆಯಲಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಈ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆದು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅಲ್ಲದೇ ಇದರಿಂದ ನೊಂದವರಿಗೆ ಸೂಕ್ತ ಪರಿಹಾರವನ್ನೂ ಸಹ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.