ಅಕ್ರಮ ದಾಸ್ತಾನು: 22 ಕ್ವಿಂಟಾಲ್ ಅಕ್ಕಿ, ರಾಗಿ ವಶ

KannadaprabhaNewsNetwork |  
Published : Oct 29, 2026, 01:45 AM IST
28ಕೆಎಂಎನ್ ಡಿ22 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಹುರಳಿಕ್ಯಾತನಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಪಡಿತರದಾರರಿಗೆ ವಿತರಿಸುವ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶನದ ಮೇರೆಗೆ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕಿ ಪೊಲೀಸ್ ಸಿಬ್ಬಂದಿಯೊಂದಿಗೆ ಜಂಟಿಯಾಗಿ ದಾಳಿ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಕ್ರಮವಾಗಿ ದಾಸ್ತಾನು ಮಾಡಿದ್ದ 22 ಕ್ವಿಂಟಲ್ ಅಕ್ಕಿ ಹಾಗೂ ರಾಗಿಯನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಹುರಳಿಕ್ಯಾತನಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಪಡಿತರದಾರರಿಗೆ ವಿತರಿಸುವ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಪ್ರತೀಕ್ ಹೆಗ್ಡೆ ಅವರ ನಿರ್ದೇಶನದ ಮೇರೆಗೆ ಆಹಾರ ಶಿರಸ್ತೇದಾರ್ ಪೂರ್ಣಿಮ, ಆಹಾರ ನಿರೀಕ್ಷಕಿ ಪೂಜಾ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಜಂಟಿಯಾಗಿ ದಾಳಿ ನಡೆಸಿದ್ದರು.ದಾಳಿ ವೇಳೆ 48 ಚೀಲ ಅಕ್ಕಿ ಹಾಗೂ 7 ಚೀಲ ರಾಗಿಯನ್ನು ವಶಪಡಿಸಿಕೊಂಡಿದ್ದಾರೆ. ಇಟ್ಟಿಗೆ ತಯಾರಿಕಾ ಕಾರ್ಖಾನೆಯು ಚಿಕ್ಕಂಕನಹಳ್ಳಿಯ ಪ್ರಭಾವಿ ಮುಖಂಡ ಶಿವಣ್ಣರ ಪುತ್ರ ನಿಖಿಲ್ ಅವರಿಗೆ ಸೇರಿದ್ದು, ಇದೀಗ ನಿಖಿಲ್ ವಿರುದ್ಧ ಅರಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮಾಹಿತಿ ತಿಳಿದ ಆರೋಪಿಗಳು ದಾಳಿ ವಿಷಯ ತಿಳಿದು ಸ್ಥಳದಲ್ಲಿ ಈ ಮೊದಲೇ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಪಡಿತರವನ್ನು ತರಾತುರಿಯಲ್ಲಿ ಸಾಗಾಟ ಮಾಡಿದ್ದು, ನೆಪಮಾತ್ರಕ್ಕೆ ಕೇವಲ 55 ಚೀಲಗಳನ್ನು ಮಾತ್ರ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಅಧಿಕಾರಿಗಳು 4 ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿ ಕೇವಲ ಬೆರಳೆಣಿಕೆ ಚೀಲಗಳು ಮಾತ್ರ ದೊರೆತಿರುವುದಾಗಿ ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೇ, ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಆರೋಪಿಗಳು ಪ್ರಭಾವಿಗಳಾಗಿದ್ದು, ಇವರ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆಹಾರ ಶಿರಸ್ತೇದಾರ್ ಪೂರ್ಣಿಮ ಈ ಸಂಬಂಧ ಪ್ರತಿಕ್ರಿಯಿಸಿ, ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಖಚಿತ ಮಾಹಿತಿ ಮೇರೆಗೆ ಉಪ ನಿರ್ದೇಶಕರ, ನಿರ್ದೇಶನದ ಮೇರೆಗೆ ದಾಳಿ ನಡೆಸಿ ಸುಮಾರು 55 ಚೀಲ ಅಕ್ಕಿ ಹಾಗೂ ರಾಗಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಶಿವಣ್ಣ ಅವರ ಪುತ್ರ ನಿಖಿಲ್‌ಗೆ ಸೇರಿದ್ದ ಇಟ್ಟಿಗೆ ಕಾರ್ಖಾನೆ ಎಂದು ತಿಳಿದು ಬಂದಿದೆ. ಅವರ ವಿರುದ್ಧ ಅರಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್