ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕಾಚೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಕದ್ದು ಕೊಯ್ದಿದ್ದ ಅಪಾರ ಪ್ರಮಾಣದ ನೀಲಗಿರಿ ಮರದ ತುಂಡುಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುವ ವೇಳೆ ಬೆನ್ನತ್ತಿ ಬರುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಮರಗಳ್ಳರು ತಪ್ಪಿಸಿಕೊಳ್ಳಲಾಗದೆ ಕರಡಹಳ್ಳಿ ಸಮೀಪದ ಶ್ರೀಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಟ್ರಾಲಿಯ ಲಿಫ್ಟ್ ಎತ್ತಿ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಕದ್ದು ಕೊಯ್ದಿದ್ದ ನೀಲಗಿರಿ ಮರದ ತುಂಡುಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿ ತೊಳಲಿ ಗ್ರಾಮದ ಮೂಲಕ ಕೋಟೆ ಬೆಟ್ಟ, ದೊಂದೆ ಮಾದಹಳ್ಳಿ ಮಾರ್ಗವಾಗಿ ಮಂಡ್ಯ ಮುಖ್ಯ ರಸ್ತೆ ಕಡೆಗೆ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಸಿಗುತ್ತಿದ್ದಂತೆ ತಾಲೂಕು ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಶನಿವಾರ ರಾತ್ರಿ 9,30ರ ಸಮಯದಲ್ಲಿ ದೇವಲಾಪುರ ಹ್ಯಾಂಡ್‌ಪೋಸ್ಟ್ ಮತ್ತು ಹುಳ್ಳೇನಹಳ್ಳಿ ಗೇಟ್‌ನಲ್ಲಿ ಕಾಯ್ದು ಕುಳಿತಿದ್ದರು.ಇದೇ ಮಾರ್ಗದಲ್ಲಿ ಬಂದ ಟ್ರ್ಯಾಕ್ಟರ್ ಮಂಡ್ಯ ಮುಖ್ಯ ರಸ್ತೆಯ ಬಸರಾಳು ಕಡೆಗೆ ಸಂಚರಿಸುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ತಡೆದು ನಿಲ್ಲಿಸಲು ಪ್ರಯತ್ನಿಸಿದರಾದರೂ ಚಾಲಕ ಟ್ರ್ಯಾಕ್ಟರ್ ನಿಲ್ಲಿಸದೆ ಅತಿವೇಗವಾಗಿ ಹೋಗುತ್ತಿದ್ದನು. ಅರಣ್ಯ ಪಾಲಕರು ಬೆನ್ನತ್ತಿರುವುದನ್ನು ಅರಿತ ಮರಗಳ್ಳರು ಹುಳ್ಳೇನಹಳ್ಳಿ ಚಿಕ್ಕಯಗಟಿ ನಡುವಿನ ಅರಣ್ಯ ಪ್ರದೇಶದ ರಸ್ತೆಯಲ್ಲಿ ತಿರುವು ಪಡೆದು ಚಿಕ್ಕಯಗಟಿ ಕೆರೆ ಸಮೀಪಕ್ಕೆ ತೆರಳಿದ್ದಾರೆ.
ಟ್ರ್ಯಾಕ್ಟರ್‌ನ ಟ್ರಾಲಿಯ ಲಿಫ್ಟ್ ಎತ್ತುತ್ತಿದ್ದಂತೆ ಮರದ ತುಂಡುಗಳು ರಸ್ತೆಗೆ ಬೀಳತೊಡಗಿದವು. ಈ ವೇಳೆ ಹಿಂಬಾಲಿಸುತ್ತಿದ್ದ ಅರಣ್ಯ ಪಾಲಕರು ನಿಯಂತ್ರಣ ತಪ್ಪಿ ಬೈಕ್‌ಗಳ ಸಹಿತ ಕೆಳಗೆ ಬಿದ್ದರು. ಅಷ್ಟರೊಳಗೆ ಸುತ್ತುವರಿದ ಮತ್ತಷ್ಟು ಸಿಬ್ಬಂದಿ ಹುಡುಕಾಟ ನಡೆಸಿದರೂ ಕೂಡ ಚಾಲಕ ಸೇರಿದಂತೆ ಟ್ರ್ಯಾಕ್ಟರ್‌ನಲ್ಲಿದ್ದ ಕಳ್ಳರ ಸುಳಿವು ಸಿಗಲಿಲ್ಲ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಕೆ.ಆರ್.ಮಂಜು, ಶಿವಲಿಂಗಯ್ಯ, ಗಸ್ತು ಅರಣ್ಯಪಾಲಕರಾದ ಪ್ರಜ್ವಲ್, ಸಚ್ಚಿನ್, ಶಿವರಾಜು, ನೂರ್‌ಪಾಷ, ಅರಣ್ಯ ವೀಕ್ಷಕ ಹೃತ್ವಿಕ್ ಕರ್ತವ್ಯ ನಿರ್ವಹಿಸಿದ್ದರು.