- ಶ್ರೀಮಠದ ಪ್ರತಿನಿಧಿಗಳು, ಕಣ್ವಮಠದ ವಿವಿಧ ಸಂಘ ಸಂಸ್ಥೆಗಳಿಂದ ಡಿಸಿಗೆ ಮನವಿ
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಹುಣಸಿಹೊಳೆಯ ಶ್ರೀಮದ್ ಕಣ್ವಮಠ ಮೂಲ ಮಹಾ ಸಂಸ್ಥಾನ ಮಠದ ಜಮೀನುಗಳ ಹಕ್ಕು ವರ್ಗಾವಣೆಯನ್ನು 2015 ರಿಂದ 2018ನೇ ಸಾಲಿನಲ್ಲಿ ಅಕ್ರಮವಾಗಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಣ್ವ ಮಠದ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ಜಿಲ್ಲಾಧಿಕಾರಿಗಳ ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಣ್ವಮಠಕ್ಕೆ 200 ವರ್ಷಗಳ ಇತಿಹಾಸವಿದೆ. ಕಣ್ವಮಠದ ಜಮೀನಿನ ಹಕ್ಕು ವರ್ಗಾವಣೆಯಲ್ಲಿ 2015 ರಿಂದ 2018 ನೇ ಸಾಲಿನಲ್ಲಿ ಅಧಿಕಾರಿಗಳು ಆಗಿನ ಪೀಠಾಧಿಪತಿಗಳೊಂದಿಗೆ ಶಾಮೀಲಾಗಿ ಜಮೀನುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಆಗಿನ ಅಧಿಕಾರಿಗಳು ಕಂದಾಯ ಅಧಿನಿಯಮದ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದ ಸುತ್ತೋಲೆ ಸಂ/ಕ/ಇ/18ಗೆ ಬೆಲೆ ಕೊಡದೆ ಸುಮಾರು 70ಕ್ಕೂ ಹೆಚ್ಚು ಎಕರೆ ಜಮೀನನ್ನು ಅಕ್ರಮ ಹಕ್ಕು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಜಮೀನು ವರ್ಗಾವಣೆ ಮಾಡಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ನಡತೆ) ಅಧಿನಿಯಮದಡಿಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಹಕ್ಕು ವರ್ಗಾವಣೆ ರದ್ದುಪಡಿಸಬೇಕು. ಇಲ್ಲದಿದ್ದರೆ ಜನಸಾಮಾನ್ಯರ ಪರ ಹಾಗೂ ಕಣ್ವಮಠದ ಪರವಾಗಿ ಕಣ್ವಮಠದ ಸಮಾಜದ ವತಿಯಿಂದ ಉಗ್ರ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು.
----