- ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ: ಲಾರಿ ಚಾಲಕ ವಶಕ್ಕೆ
- ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಕನ್ನಡಪ್ರಭ ವಾರ್ತೆ ಶಹಾಪುರ
ಅಕ್ರಮವಾಗಿ ರಸಗೊಬ್ಬರ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರು ದಾಳಿ ಮಾಡಿ 2.26 ಲಕ್ಷ ರು. ಮೌಲ್ಯದ ರಸಗೊಬ್ಬರ ಹಾಗೂ ಕ್ರಿಮಿನಾಶಕ ದಾಸ್ತಾನು ವಶಕ್ಕೆ ಪಡೆದು, ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ತಾಲೂಕಿನ ಗೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ನಡಿಹಾಳ ಗ್ರಾಮದ ಹತ್ತಿರ ನಡೆದಿದೆ.ಲಾರಿ ಮತ್ತು ಚಾಲಕ ವಿಜಯಪುರದ ಸಯ್ಯದ್ ಅಮೀನ್ ಸಾಬ್ ಉಕ್ಕಲಿ ಅವರನ್ನು ಬಂಧಿಸಿದ್ದು, ಅಕ್ರಮವಾಗಿ ಸಾಗಣೆ ಮಾಡಲು ಸೂಚಿಸಿದ್ದ ವಿಜಯಪುರದ ಭರತೇಶ ಚಾಂದಕೋಟಿ ಅವರ ಮೇಲೆ ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಶೋಕ್ ಲೇಲ್ಯಾಂಡ್ ಗೂಡ್ಸ್ (ಲಾರಿ ನಂ. ಕೆಎ 28 ಎಎ 0401) ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 50 ಚೀಲ ರಸಗೊಬ್ಬರ ಅದರ ಮೌಲ್ಯ 70 ಸಾವಿರ ರು. ಹಾಗೂ 44 ಡಬ್ಬಾ ರಸಗೊಬ್ಬರ ಅದರ ಮೌಲ್ಯ 1.56ಲಕ್ಷ ರು. ಹೀಗೆ ಒಟ್ಟು 2.26ಲಕ್ಷ ರು. ಅಂದಾಜು ಮೌಲ್ಯದ ವಸ್ತು ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಸಿಂದಗಿ ಮತ್ತು ಚಾಮನಾಳ ರಸ್ತೆಯ ತಾಲೂಕಿನ ನಡಿಹಾಳ ಗ್ರಾಮದ ಬಳಿ ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಭರತೇಶ ಎನ್ನುವವರು ವಿಜಯಪುರದ ಅಂಗಡಿಯಲ್ಲಿ ಲೋಡ್ ಮಾಡಿದ್ದ ರಸಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿಯನ್ನು ಶಹಾಪುರ ತಾಲೂಕಿನ ಚಾಮನಾಳ ಗ್ರಾಮಕ್ಕೆ ತಲುಪಿಸುವಂತೆ ಸೂಚಿಸಿದ್ದರಿಂದ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಚಾಲಕ ಪೊಲೀಸರು ಮಾಹಿತಿ ನೀಡಿದ್ದಾನೆ.
ಈ ಕುರಿತು ಗೋಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪರಶುರಾಮ ಅವರು ದೂರು ನೀಡಿದ್ದಾರೆ. ಗೋಗಿ ಠಾಣೆಯ ಪಿ.ಎಸ್.ಐ. ದೇವೆಂದ್ರರೆಡ್ಡಿ ಅವರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.----
22ವೈಡಿಆರ್1: ಶಹಾಪುರ ತಾಲೂಕಿನ ನಡಿಹಾಳ ಗ್ರಾಮದ ಹತ್ತಿರ ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ನಕಲಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಿಯನ್ನು ಪೊಲೀಸರು ಜಪ್ತಿ ಮಾಡಿರುವುದು.