ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಸ್ತುತ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಭತ್ತದ ಬೆಳೆಯು ತೆನೆ ಬರುವ ಹಂತದಿಂದ ಹೂವಾಡುವ ಹಂತದಲ್ಲಿದೆ. ಅಕ್ಟೋಬರ್ ನಿಂದ ಇದುವರೆಗೆ ವಾಡಿಕೆ 254 ಮಿ.ಮೀ. ಮಳೆಯಾಗಿದೆ. ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ಕಳೆದ ವಾರದಲ್ಲಿಯೇ 96 ಮಿ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನು 3-4 ದಿನ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಇದರಿಂದಾಗಿ ಮೆಕ್ಕೆಜೋಳದ ತೆನೆ ಹಸಿಯಾಗಿರುವುದರಿಂದ ಕಟಾವು ಮಾಡಲು ಹಾಗೂ ಒಣಗಿಸಲು ತೊಂದರೆಯಾಗುತ್ತದೆ. ಅಂದಾಜು 12000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಮಳೆಯ ಕಾರಣದಿಂದ ಕಟಾವು ಸಾಧ್ಯವಾಗದೇ ತೆನೆಯಲ್ಲಿಯೇ ಕಾಳುಗಳು ಮೊಳಕೆ ಬರುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಇದರಿಂದ ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು. ಬೆಳೆ ವಿಮೆ ಮಾಡಿಸಿದ ರೈತರು ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಅಥವಾ ಭತ್ತದ ಬೆಳೆ ಹಾನಿಯಾಗಿದ್ದಲ್ಲಿ ಒರಿಯಂಟಲ್ ಇನ್ಸುರೆನ್ಸ್ ವಿಮಾ ಸಂಸ್ಥೆಯಲ್ಲಿ ವೈಯಕ್ತಿಕ ಬೆಳೆ ಹಾನಿಗೆ ಪರಿಹಾರ ಕೋರಿ ಇನ್ನೆರಡು ದಿನದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಈ ಹಿಂದೆ ಜುಲೈ ಮಾಹೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿರುವ ರೈತರನ್ನು ಹೊರತುಪಡಿಸಿ, ಉಳಿದವರು ಅರ್ಜಿ ಸಲ್ಲಿಸಬಹುದು. ಅಥವಾ ಒರಿಯಂಟಲ್ ಇನ್ಸುರೆನ್ಸ್ ಸಂಸ್ಥೆಯ ಸಹಾಯವಾಣಿ 1800118485 ಅಥವಾ ಕೃಷಿರಕ್ಷಕ ಪೋರ್ಟಲ್ ಸಂಖ್ಯೆ 14447 ಗೆ ಕರೆಮಾಡಿ ಪರಿಹಾರದ ದೂರನ್ನು ನೊಂದಣಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಭತ್ತದಲ್ಲಿ ಬೆಂಕಿ ರೋಗ, ಕಾಡಿಗೆ ರೋಗ, ಊದುಬತ್ತಿ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ 2 ಗ್ರಾಂ ಪ್ರತಿ ಲೀಟರ್ ಗೆ ಕಾರ್ಬನ್ಡೇಜಿಮ್+ ಮ್ಯಾಂಕೊಜೆಬ್, ಅಥವಾ 1 ಗ್ರಾಂ ಪ್ರತಿ ಲೀಟರ್ ಟ್ರೈಸೈಕ್ಲಾಜೋಲ್ ಅನ್ನು ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪಡಿಸಬೇಕಾಗುತ್ತದೆ. ಪೀಡೆನಾಶಕಗಳನ್ನು ಸಿಂಪರಣೆ ಮಾಡುವಾಗ ಗದ್ದೆಯ ನೀರನ್ನು ಒಂದು ವಾರದವರೆಗೆ ಸಂಪೂರ್ಣವಾಗಿ ಬಸಿದು ಹಾಕಬೇಕು ಎಂದು ತಿಳಿಸಿದ್ದಾರೆ.