ನಿಲ್ಲದ ಮಳೆಹಾನಿ: ವರುಣಾರ್ಭಟಕ್ಕೆ ಜನ ತತ್ತರ

KannadaprabhaNewsNetwork | Published : Oct 23, 2024 12:54 AM

ಸಾರಾಂಶ

ಮಳೆ ನಿಂತರೂ ಮಳೆ ಹಾನಿ ನಿಲ್ಲಲಿಲ್ಲ ಎಂಬ ಗಾದೆಯಂತೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿ, ಮನೆ ಹಾನಿ, ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತುಂಗಭದ್ರಾ ನದಿಯಲ್ಲಿ ನೀರು ಹರಿವು ಹೆಚ್ಚಾಗುತ್ತಿರುವುದು ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ.

- ಮುಂದುವರಿದ ಅತಿವೃಷ್ಟಿ ಅನಾಹುತಗಳು । ಹೊಲ, ರಸ್ತೆಗಳು ಜಲಾವೃತವಾಗಿ ಸಂಪರ್ಕ ಕಡಿತ ।

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಳೆ ನಿಂತರೂ ಮಳೆ ಹಾನಿ ನಿಲ್ಲಲಿಲ್ಲ ಎಂಬ ಗಾದೆಯಂತೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿ, ಮನೆ ಹಾನಿ, ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತುಂಗಭದ್ರಾ ನದಿಯಲ್ಲಿ ನೀರು ಹರಿವು ಹೆಚ್ಚಾಗುತ್ತಿರುವುದು ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ.

ತಾಲೂಕಿನ ಆನಗೋಡು ಹೋಬಳಿಯ ವ್ಯಾಪ್ತಿಯಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ವಾರದಿಂದ ಸುರಿದ ಮಳೆಗೆ ನೂರಾರು ಎಕರೆ ಬತ್ತ, ಮೆಕ್ಕೆಜೋಳ, ರಾಗಿ ಇತರೆ ಬೆಳೆಗಳು ಹಾಳಾಗಿ, ರೈತರ ಆತಂಕ ಹೆಚ್ಚಿಸಿವೆ. ಆಲೂರು ಹಟ್ಟಿ ಗ್ರಾಮದಲ್ಲಿ ರೈತ ಗಣೇಶ ನಾಯ್ಕ ತಮ್ಮ 3 ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ಜಲಾವೃತವಾಗಿದೆ. ಕೊಯ್ಲಿಗೆ ಬಂದಿದ್ದ ರಾಗಿ ಜಮೀನಿನಲ್ಲಿಯೇ ಮೊಳಕೆಯೊಡೆಯುತ್ತಿದ್ದು, ರೈತ ಗಣೇಶ ನಾಯ್ಕ ಇತರೆ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

ಬೆಳೆ ಬೆಳೆಯಲು ಸಾಲ ಸೋಲ ಮಾಡಿದ್ದ ರೈತರ ಕಣ್ಣಲ್ಲಿ ಈಗ ನೀರು ಸುರಿಯುತ್ತಿದೆ. ಕಷ್ಟಪಟ್ಟು ಬೆಳೆಸಿದ ಬೆಳೆ ಕೈಗೆ ಬಾರದ ಸ್ಥಿತಿಗೆ ರೈತರು ಏನು ಮಾಡಬೇಕೆಂಬುದೇ ಗೊತ್ತಾಗದೇ, ಸರ್ಕಾರ ತಮ್ಮ ನೆರವಿಗೆ ಧಾವಿಸಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

30 ಕಿಮೀ ಸುತ್ತಿಕೊಂಡು ಪ್ರಯಾಣ:

ಚನ್ನಗಿರಿ ತಾಲೂಕಿನ ಹರನಹಳ್ಳಿ, ಕೆಂಗಾಪುರ ಭಾಗದಲ್ಲಿ ಹರಿದ್ರಾವತಿ ಹಳ್ಳ ಮಂಗಳವಾರವೂ ತುಂಬು ಹರಿದು, ರಸ್ತೆ ಸಂಪರ್ಕ ಕಡಿತವಾಗಿದೆ. ಹರನಹಳ್ಳಿ, ಕೆಂಗಾಪುರ ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸೇತುವೆಯೂ ಮುಳುಗಡೆಯಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದಾವಣಗೆರೆ, ಚನ್ನಗಿರಿಗೆ ಹೋಗಲು 30 ಕಿಮೀ ಸುತ್ತಿಕೊಂಡು ಪ್ರಯಾಣಿಸಬೇಕಾಯಿತು.

ಹರಿಹರ ತಾಲೂಕಿನಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಸತತ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸುಕ್ಷೇತ್ರದ ಉಕ್ಕಡಗಾತ್ರಿಯಲ್ಲಿ ಸ್ನಾನಘಟ್ಟ, ಮೆಟ್ಟಿಲುಗಳು ಮುಳುಗಡೆಯಾಗಿವೆ. ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ಮಳೆರಾಯ ಒಂದಿಷ್ಟು ಬಿಡುವು ಕೊಟ್ಟರೂ, ಮಳೆಹಾನಿ ಮಾತ್ರ ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

- - -

Share this article