ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿಯನ್ನು ಉಳಿಸಿ ಅವುಗಳಿಗೆ ಜೀವ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ತಹಸೀಲ್ದಾರ್‌ಗಳು, ಕಂದಾಯಾಧಿಕಾರಿಗಳು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಿದರೆ ಇದು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.ಮಂಡ್ಯ ಜಿಲ್ಲೆಯಲ್ಲೇ ಆಧಾರ್ ಸೀಡಿಂಗ್ ವೇಳೆ ೨,೯೯,೫೩೩ ಆರ್‌ಟಿಸಿಗಳು ಸತ್ತವರ ಹೆಸರಿನಲ್ಲಿವೆ. ಇದರಲ್ಲಿ ೩೩,೫೫೭ ಪ್ರಕರಣಗಳಲ್ಲಿ ಪೌತಿ ಖಾತೆ ಮಾಡಲಾಗಿದೆ. ಉಳಿದಿದ್ದನ್ನು ಮಾಡುವುದು ಯಾವಾಗ. ಪೌತಿ ಖಾತೆ ಮಾಡಿಕೊಡುವುದಕ್ಕೆ ಇರುವ ತೊಂದರೆಯಾದರೂ ಏನು ಎಂದು ನೇರವಾಗಿಯೇ ಪ್ರಶ್ನಿಸಿದರು.
ಆಗ ಕೆಲವು ಕಂದಾಯಾಧಿಕಾರಿಗಳು ಉತ್ತರಿಸಿ, ಶೇ.೭೦ರಷ್ಟು ಪ್ರಕರಣಗಳಲ್ಲಿ ಸಾವನ್ನಪ್ಪಿರುವವರಿಗೆ ಮರಣ ಪ್ರಮಾಣಪತ್ರವಿಲ್ಲ. ಅದನ್ನು ನೀಡದೆ ಪೌತಿ ಖಾತೆ ಮಾಡಿಕೊಡುವುದಕ್ಕೆ ಅಡಚಣೆಯಾಗುತ್ತಿದೆ ಎಂದು ಉತ್ತರಿಸಿದರು. ಆಗ ಸಚಿವ ಕೃಷ್ಣಭೈರೇಗೌಡರು, ಮರಣ ಪ್ರಮಾಣ ಪತ್ರವಿಲ್ಲದಿದ್ದರೆ ಕುಟುಂಬ ಸದಸ್ಯರ ಹೇಳಿಕೆಯನ್ನು ದಾಖಲಿಸಿಕೊಂಡು ಕನಿಷ್ಠ ಜಂಟಿ ಖಾತೆಯನ್ನಾದರೂ ಮಾಡಿಕೊಡಿ ಎಂದು ಸಲಹೆ ನೀಡಿದಾಗ, ಪೌತಿ ಖಾತೆಯ ಹೇಗೆ ಮಾಡಬೇಕೆಂಬ ಬಗ್ಗೆ ಇಡೀ ಜಿಲ್ಲೆಗೆ ಒಂದೇ ಮಾದರಿಯ ನಿಯಮಾವಳಿಯನ್ನು ರೂಪಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂಬ ಸಲಹೆ ಅಧಿಕಾರಿಗಳಿಂದ ಕೇಳಿಬಂದಿತು. ಅದಕ್ಕೆ ಪೂರಕವಾಗಿ ಸಚಿವರು ನಿಯಮಾವಳಿಯನ್ನು ರೂಪಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೂಚಿಸಿದರು.
ಹೊಸ ನಿಯಮಾವಳಿ ರೂಪಿಸಿಲ್ಲ:
ಮಂಡ್ಯ ಜಿಲ್ಲೆಯಲ್ಲಿ ೬೩,೬೬೬ ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು, ೫೭೨೪೫ ಅರ್ಜಿಗಳು ಗ್ರಾಮ ಆಡಳಿತಾಧಿಕಾರಿ ಲಾಗಿನ್‌ನಲ್ಲೇ ಇವೆ. ೧೯೬ ಅರ್ಜಿಗಳು ಮಾತ್ರ ಆರ್‌ಐ ಲಾಗಿನ್‌ಗೆ ಬಂದಿವೆ. ಪ್ರತಿ ತಾಲೂಕಿನಲ್ಲೂ ಆದಷ್ಟು ಬೇಗ ಗೋಮಾಳವನ್ನು ಗುರುತಿಸಿಕೊಂಡು ಅರ್ಹತೆ ಇರುವವರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡುವಂತೆ ಸೂಚಿಸಿದರು.
ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ ನಂತರ ಅದನ್ನು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳು ಅದನ್ನು ಸುಪರ್ದಿಗೆ ತೆಗೆದುಕೊಂಡು ಸಂರಕ್ಷಿಸಬೇಕು. ಅದನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲೇ ಉಳಿಸಿದರೆ ಮತ್ತೆ ಒತ್ತುವರಿಯಾಗುತ್ತದೆ. ನಾವೂ ಎಷ್ಟು ಬಾರಿ ಒತ್ತುವರಿ ತೆರವುಗೊಳಿಸಲು ಸಾಧ್ಯ. ೧೫ ವರ್ಷದಿಂದ ಇದೇ ಕೆಲಸ ನಡೆಯುತ್ತಿದೆ. ಕೆರೆಗಳನ್ನು ಒಮ್ಮೆ ಅಳತೆ ಮಾಡಿ ಒತ್ತುವರಿಗೊಳಿಸಿದ ಕೂಡಲೇ ಅದನ್ನು ಯಥಾ ಸ್ಥಿತಿಯಲ್ಲೇ ಬಿಡದೆ ಸಂಬಂಧಿಸಿದ ಪಂಚಾಯ್ತಿಗಳಿಗೆ ಮಾಲೀಕತ್ವ ನೀಡಬೇಕು. ಇದೇ ಕೆಲಸ ಮಾಡಿಕೊಂಡಿದ್ದರೆ ಉಳಿದ ಕೆಲಸಗಳ ಬಗ್ಗೆ ಗಮನಹರಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಶಾಸಕರಾದ ಪಿ.ರವಿಕುಮಾರ, ದರ್ಶನ್ ಪುಟ್ಟಣ್ಣಯ್ಯ ಇತರರಿದ್ದರು.