ಕನ್ನಡಪ್ರಭ ವಾರ್ತೆ ರಾಮದುರ್ಗ ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದಾರೆ. ಅಲ್ಲದೆ ಭೂಮಿಗೆ ರಾಸಾಯನಿಕ ಮಿಶ್ರಿತ ರಸಗೊಬ್ಬರದ ಅತಿಯಾದ ಬಳಕೆಯ ಪರಿಣಾಮ ಬೆಳೆಯುವುದೆಲ್ಲ ವಿಷವಾಗುತ್ತಿದೆ. ಹೀಗಾಗಿ ರೈತರೆಲ್ಲ ಸಾವಯುವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದಾರೆ. ಅಲ್ಲದೆ ಭೂಮಿಗೆ ರಾಸಾಯನಿಕ ಮಿಶ್ರಿತ ರಸಗೊಬ್ಬರದ ಅತಿಯಾದ ಬಳಕೆಯ ಪರಿಣಾಮ ಬೆಳೆಯುವುದೆಲ್ಲ ವಿಷವಾಗುತ್ತಿದೆ. ಹೀಗಾಗಿ ರೈತರೆಲ್ಲ ಸಾವಯುವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ಸೋಮವಾರ ತಾಲೂಕಿನ ಸುಕ್ಷೇತ್ರ ಕುಳ್ಳೂರಿನಲ್ಲಿ ಶ್ರೀ ಗುರು ಶಿವಯೋಗೀಶ್ವರರ 118ನೇ ಪುಣ್ಯಾರಾಧನೆ, ಶ್ರೀ ಗುರು ರೇವಯ್ಯ ಶಿವಯೋಗಿಗಳ 150 ನೇ ಜಯಂತ್ಯೋತ್ಸವ, ಶ್ರೀ ಸಿದ್ದರಾಮ ಶಿವಯೋಗಿಗಳ 50ನೇ ಪುಣ್ಯಾರಾಧನೆ ಹಾಗೂ ಶ್ರೀ ಶಿವಯ್ಯ ಮಹಾಸ್ವಾಮಿಗಳ 6ನೇ ಪುಣ್ಯಾರಾಧನೆ ಕಾರ್ಯಕ್ರಮದ 2ನೇ ದಿನದ ಕೃಷಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಕುಳ್ಳೂರು ಗ್ರಾಮವು ಆಧ್ಯಾತ್ಮಿಕ ಕೇಂದ್ರವಾಗಿದೆ. ಶ್ರೀಮಠದಲ್ಲಿ ಮೇಲು ಕೀಳು ಎನ್ನುವ ಭಾವನೆ ಹೊಡೆದು ಹಾಕಿ ವಿಶ್ವಗುರು ಬಸವಣ್ಣನವರ ಸಮಾನತೆ ಕಂಡು ಬರುತ್ತಿದೆ. ಸಮಾನತೆ ಸಾರುವ ಪೂಜ್ಯರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಪ್ರಗತಿಪರ ರೈತಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತರು ಯಾರನ್ನು ನಂಬದೆ ಭೂಮಿ ತಾಯಿ ನಂಬಿ ಜೀವನ ನಡೆಸಬೇಕು. ಸಹಜ ಕೃಷಿ ಮಾಡದೆ ಬಹುಬೆಳೆ ಬೆಳೆಯಬೇಕು ಎಂದು ತಿಳಿಸಿದರು.ಯುವಕರು ಕೆಲಸ ಹುಡುಕಿ ಪಟ್ಟಣಗಳಿಗೆ ತೆರಳುವ ಬದಲು ಗ್ರಾಮೀಣ ಪ್ರದೇಶದಲ್ಲಿ ಇರುವ ಜಮೀನುಗಳಲ್ಲಿ ಕೃಷಿ ಕೆಲಸ ಮಾಡಬೇಕು. ತಾಂತ್ರಿಕತೆ ಮತ್ತು ವಿವಿಧ ವೃತ್ತಿಗಿಂತ ಕೃಷಿ ಕ್ಷೇತ್ರ ಶ್ರೇಷ್ಠವಾಗಿದೆ. ಜಗತ್ತಿನಲ್ಲಿ ರೈತರ ಸ್ವಾಭಿಮಾನದಿಂದ ಬದುಕುವ ವ್ಯಕ್ತಿ ರೈತನಾಗಿದ್ದಾನೆ. ರೈತನ ಮಕ್ಕಳಿಗೆ ಹೆಣ್ಣು ಕೊಡುವಂತಾಗಬೇಕು. ಕಲಿತ ಹೆಣ್ಣು ಮಕ್ಕಳು ಕೃಷಿ ವಲಯಕ್ಕೆ ಬಂದರೆ ಸ್ಮಾರ್ಟ್ ಕೃಷಿಯಾಗಲು ಸಾಧ್ಯ ಎಂದು ಹೇಳಿ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಕಭೀರಾನಂದಾಶ್ರಾಮದ ಶಿವಲಿಂಗಾನಂದಸ್ವಾಮಿಗಳು ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ನಿರ್ಧಾರ ಮಾಡುವಂತಾಗಬೇಕು. ಹೀಗಾದಾಗ ಮಾತ್ರ ಎಲ್ಲರೂ ಕೃಷಿಯತ್ತ ಒಲವು ತೋರಲು ಸಾಧ್ಯವಾಗುತ್ತದೆ. ಆದರೆ ಇಂದು ಹಗಲಿರುಳು ಶ್ರಮ ಪಟ್ಟು ರೈತರು ಬೆಳೆದ ಬೆಳೆಗೆ ಶ್ರಮದ ಅರಿವು ತಿಳಿಯದವರು, ಬೆಲೆ ನಿರ್ಧಾರ ಮಾಡುತ್ತಿರುವದು ಬಂಜೆಗೆ ಏನು ಗೊತ್ತು ಹೆರಿಗೆಯ ನೋವು ಅನ್ನುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದ ಶ್ರೀಗಳು, ಶ್ರಮ ಪಟ್ಟು ದುಡಿದು ತಿನ್ನುವ ರೈತರು ಮಾರ್ಗದರ್ಶಿಗಳಾಗಬೇಕು ಎಂದರು.ಕಟಕೋಳ ವೀರಕ್ತಮಠದ ಸಚ್ಚಿದಾನಂದ ಸ್ವಾಮಿಗಳು ಮಾತನಾಡಿ, ಫಲವತ್ತಾದ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಲು ಹೇಳಿದ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೆ? ವಿಷವನ್ನು ಭೂಮಿಗೆ ಹಾಕುತ್ತಿದ್ದೇವೆ ಎಂದು ಪ್ರಶ್ನಿಸಿದರು.
ಜಂಟಿ ಕೃಷಿ ನಿರ್ದೇಶಕ ಎಚ್. ಡಿ.ಕೋಳೆಕರ ಮಾತನಾಡಿ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ಕೃಷಿಯನ್ನು ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸಾವಯವ ಕೃಷಿ ಪ್ರಶಸ್ತಿ ವಿಜೇತ ಧರೇಪ್ಪ ಕಿತ್ತೂರ, ಕೃಷಿ ಅಧಿಕಾರಿಗಳಾದ ಎ.ಬಿ.ವಾಲಿಕಾರ, ರುದ್ರಪ್ಪ ಕುಂಬಾರ, ಜಾನಪದ ಕೃಷಿಕ ಸಿದ್ಧಪ್ಪ ಬಿದರಿ, ನಿಜಗುಣಾನಂದಸ್ವಾಮಿಗಳು, ಚಿದಾನಂದಸ್ವಾಮಿಗಳು, ಪ್ರಭುದೇವರು ಸೇರಿದಂತೆ ಹಲವರಿದ್ದರು. ರವಿ ಭರಮನಾಯ್ಕರ ಸ್ವಾಗತಿಸಿದರು. ಬಸವಾನಂದಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು