ಕನ್ನಡಪ್ರಭ ವಾರ್ತೆ ಬೆಳಗಾವಿ ನಗರದಲ್ಲಿ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಭವ್ಯ ಶೋಭಾಯಾತ್ರೆ ಧಾರ್ಮಿಕ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದ ಸಮನ್ವಯವಾಗಿ ಕಣ್ಮನ ಸೆಳೆಯಿತು. ನಗರದ ಟಿಳಕ ಚೌಕ್‌ನಲ್ಲಿ ಮೇಯರ್ ಪ್ರೀತಿ ಕಾಮಕರ ಹಾಗೂ ಐಆರ್‌ಎಸ್ ನಿವೃತ್ತ ಅಧಿಕಾರಿ ನರೇಂದ್ರ ಜೈನ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದಲ್ಲಿ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಭವ್ಯ ಶೋಭಾಯಾತ್ರೆ ಧಾರ್ಮಿಕ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದ ಸಮನ್ವಯವಾಗಿ ಕಣ್ಮನ ಸೆಳೆಯಿತು. ನಗರದ ಟಿಳಕ ಚೌಕ್‌ನಲ್ಲಿ ಮೇಯರ್ ಪ್ರೀತಿ ಕಾಮಕರ ಹಾಗೂ ಐಆರ್‌ಎಸ್ ನಿವೃತ್ತ ಅಧಿಕಾರಿ ನರೇಂದ್ರ ಜೈನ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ಶೇರಿ ಗಲ್ಲಿ, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರಸ್ತೆ, ಶಹಾಪುರ ಕೋರೆ ಗಲ್ಲಿ, ಎಸ್‌ಪಿಎಂ ರಸ್ತೆ, ಬಸವೇಶ್ವರ ವೃತ್ತ ಮಾರ್ಗವಾಗಿ ಯಾತ್ರೆ ಸಾಗಿದ್ದು, ಹಿಂದವಾಡಿಯ ಮಹಾವೀರ ಭವನದಲ್ಲಿ ಸಮಾಪ್ತಿಯಾಯಿತು.

ಸುಡು ಬಿಸಿಲನ್ನೂ ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಶ್ರಾವಕ, ಶ್ರಾವಕಿಯರು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು. ಯುವಕರು, ಮಹಿಳೆಯರು ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗ ತುಂಬಿದರು. 35ಕ್ಕೂ ಅಧಿಕ ರೂಪಕ ವಾಹನಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಒಂದಕ್ಕಿಂತ ಮತ್ತೊಂದು ರೂಪಕ ಆಕರ್ಷಕವಾಗಿದ್ದು, ಜಲ ಸಂರಕ್ಷಣೆ, ಭೂಮಿ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದವು. ಧರ್ಮಸ್ಥಳ ಕುರಿತ ರೂಪಕ ಹಾಗೂ ಸತ್ಯಕ್ಕೆ ಜಯ, ಸುಳ್ಳಿಗೆ ಸೋಲು ಎನ್ನುವ ನ್ಯಾಯದ ತಕ್ಕಡಿ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ಜೊತೆಗೆ ಜನಗಣತಿ ಅರಿವು ಮೂಡಿಸುವ ರೂಪಕಗಳೂ ಮೆಚ್ಚುಗೆ ಪಡೆದವು.

ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಸಾಂಪ್ರದಾಯಿಕ ವೇಷಭೂಷಣದಲ್ಲಿ ಜೈನ ಸಮುದಾಯದವರು ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು. ಮೆರವಣಿಗೆ ಮಾರ್ಗದಲ್ಲಿ ಹಲವರು ಕುಡಿಯುವ ನೀರು ಮತ್ತು ತಂಪು ಪಾನೀಯ ವಿತರಿಸಿ ಸೇವಾ ಮನೋಭಾವ ತೋರಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ 1999ರಿಂದ ದಿಗಂಬರ ಮತ್ತು ಶ್ವೇತಾಂಬರ ಜೈನರು ಒಗ್ಗಟ್ಟಿನಿಂದ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ವರ್ಷ 35ಕ್ಕೂ ಹೆಚ್ಚು ರೂಪಕಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಎಲ್ಲ ಸಮುದಾಯದ ಜನರು ಮೆರವಣಿಗೆ ಅಂತ್ಯದವರೆಗೆ ಉತ್ಸಾಹದಿಂದ ಹೆಜ್ಜೆ ಹಾಕಿ ಗಮನ ಸೆಳೆದರು ಎಂದರು.

ಆಕರ್ಷಕವಾದ ರೂಪಕಗಳನ್ನು ಸಿದ್ಧಪಡಿಸುವ ಮೂಲಕ ವಿವಿಧ ಮಂಡಳಗಳು ಈ ಮೆರವಣಿಗೆಗೆ ಕೊಡುಗೆ ನೀಡಿವೆ ಎಂದು ಶ್ಲಾಘಿಸಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ಜೈನ ಸಮುದಾಯ ಜನಸಂಖ್ಯೆ ಕಡಿಮೆ ಇದ್ದರೂ, ಅಗತ್ಯವಿದ್ದಾಗ ಸಮಾಜದೊಂದಿಗೆ ಸದಾ ನಿಂತಿದೆ. ವಿವಿಧ ವರ್ಗಗಳ ಜನರ ಸಹಾಯಕ್ಕೆ ಬಂದಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅವರ ಸೇವೆ ಸ್ಮರಣೀಯ. ಜೈನ ಸಮುದಾಯವು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ಇಡೀ ಮೆರವಣಿಗೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉಪಮೇಯರ್‌ ಹನುಮಂತ ಕೊಂಗಾಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಮಾಜಿ ಶಾಸಕ ಸಂಜಯ ಪಾಟೀಲ, ರವಿರಾಜ ಪಾಟೀಲ, ರಾಜೇಂದ್ರ ಜೈನ ಕಟಾರಿಯಾ, ಶಿವನಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.-----

ಬಾಕ್ಸ್‌....

ಗಮನ ಸೆಳೆದ ಧರ್ಮಸ್ಥಳ ಬುರುಡೆ ಪ್ರಕರಣ

ಮಹಾವೀರ ಜಯಂತಿ ಪ್ರಯುಕ್ತ ನಗರದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣವನ್ನು ಆಧರಿಸಿದ ವಿಶೇಷ ರೂಪಕ ಸಾರ್ವಜನಿಕರ ಗಮನ ಸೆಳೆಯಿತು. ಮೆರವಣಿಗೆಯಲ್ಲಿದ್ದ ಈ ರೂಪಕದಲ್ಲಿ ಸತ್ಯಕ್ಕೆ ಜಯ, ಸುಳ್ಳಿಗೆ ಸೋಲು ಎಂಬ ಸಂದೇಶವನ್ನು ಪ್ರತಿಪಾದಿಸುವ ನ್ಯಾಯ ತಕ್ಕಡಿ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಸಮಾಜದಲ್ಲಿ ಸತ್ಯ ಮತ್ತು ನ್ಯಾಯದ ಮಹತ್ವವನ್ನು ಬಿಂಬಿಸುವ ಉದ್ದೇಶದಿಂದ ಈ ರೂಪಕವನ್ನು ವಿನ್ಯಾಸಗೊಳಿಸಲಾಗಿತ್ತು. ಧರ್ಮಸ್ಥಳ ಬುರುಡೆ ಪ್ರಕರಣದ ಹಿನ್ನೆಲೆಯನ್ನು ಪ್ರತಿಬಿಂಬಿಸುವ ದೃಶ್ಯಾವಳಿಗಳು ಹಾಗೂ ನ್ಯಾಯದ ಪರವಾದ ಸಂದೇಶಗಳು ಜನರಲ್ಲಿ ಚಿಂತನೆ ಮೂಡಿಸುವಂತಿದ್ದವು. ವಿಶೇಷವಾಗಿ ಯುವಕರು ಹಾಗೂ ಭಕ್ತರಲ್ಲಿ ಈ ರೂಪಕ ಹೆಚ್ಚಿನ ಕುತೂಹಲಕ್ಕೆ ಕಾರಣವಾಯಿತು.