ಕನ್ನಡಪ್ರಭ ವಾರ್ತೆ ಖಾನಾಪುರ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪಂಚವಾರ್ಷಿಕ ಚುನಾವಣೆಯಲ್ಲಿ ಮೃತಪಟ್ಟವರ ಹೆಸರಲ್ಲಿ ಮತದಾನ ನಡೆದಿದ್ದು, ಈ ಕುರಿತು ವಿವರವಾದ ತನಿಖೆ ನಡೆಸಿ ಅಕ್ರಮ ಪತ್ತೆ ಹಚ್ಚಬೇಕು ಎಂದು ಜಾಂಬೋಟಿ-ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಧನಶ್ರೀ ದೇಸಾಯಿ ಸಹಕಾರ ಸಂಘಗಳ ಉಪ ನಿಬಂಧಕರನ್ನು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪಂಚವಾರ್ಷಿಕ ಚುನಾವಣೆಯಲ್ಲಿ ಮೃತಪಟ್ಟವರ ಹೆಸರಲ್ಲಿ ಮತದಾನ ನಡೆದಿದ್ದು, ಈ ಕುರಿತು ವಿವರವಾದ ತನಿಖೆ ನಡೆಸಿ ಅಕ್ರಮ ಪತ್ತೆ ಹಚ್ಚಬೇಕು ಎಂದು ಜಾಂಬೋಟಿ-ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಧನಶ್ರೀ ದೇಸಾಯಿ ಸಹಕಾರ ಸಂಘಗಳ ಉಪ ನಿಬಂಧಕರನ್ನು ಆಗ್ರಹಿಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕಳೆದ ಮಾ.22ರಂದು ನಡೆದ ಜಾಂಬೋಟಿ-ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿನ್ ಸಾಲಗಾರರ ಕ್ಷೇತ್ರದಲ್ಲಿ 147 ಮತದಾರರಿದ್ದು, ಅವರಲ್ಲಿ 25 ಮತದಾರರು ಮೃತಪಟ್ಟಿದ್ದರು. ಆದರೆ ಮತದಾನ ಮುಗಿದಾಗ ಮೃತಪಟ್ಟವರ ಪೈಕಿ ಒಬ್ಬರ ಹೆಸರಲ್ಲಿ ಮತದಾನ ನಡೆದಿರುವುದು ಗಮನಕ್ಕೆ ಬಂದ ಕೂಡಲೇ ತಾವು ಚುನಾವಣಾಧಿಕಾರಿಗಳಿಗೆ ವಿಷಯ ತಲುಪಿಸಿದ್ದೇವೆ. ಚುನಾವಣಾಧಿಕಾರಿಗಳು ತನಿಖೆ ನಡೆಸಿದಾಗ ಮೃತಪಟ್ಟವರ ಹೆಸರಲ್ಲಿ ಒಬ್ಬ ವ್ಯಕ್ತಿ ಮತದಾನ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.

ಜೊತೆಗೆ ಬಿಡಿಸಿಸಿ ನಿರ್ದೇಶಕ ಅರವಿಂದ ಪಾಟೀಲ ಅವರು ಈ ಚುನಾವಣೆಯಲ್ಲಿ ತಮ್ಮ ಬೆಂಬಲಿಗರೇ ಜಯಗಳಿಸಬೇಕು ಎಂಬ ಉದ್ದೇಶದಿಂದ ಸೆ.11, 2024ರಂದು ಒಂದೇ ದಿನ ಸಂಘಕ್ಕೆ 107 ಜನರನ್ನು ಹೊಸದಾಗಿ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದಾರೆ. ಅದರಲ್ಲಿ ಕೆಲವರಿಗೆ ಸಾಲ ವಿತರಿಸಲಾಗಿದೆ. ಆದರೆ ಇವುಗಳ ದಾಖಲೆ ನಿರ್ವಹಿಸಿಲ್ಲ. ಈ ವಿಷಯದ ಬಗ್ಗೆಯೂ ತಾವು ಸಲ್ಲಿಸಿದ ದೂರಿನ ತನಿಖೆ ನಡೆಸಿರುವ ಚುನಾವಣಾಧಿಕಾರಿಗಳು ಸಹಕಾರ ಸಂಘಗಳ ಉಪ ನಿಬಂಧಕರಿಗೆ ವಿವರವಾದ ಮಾಹಿತಿ ಸಲ್ಲಿಸಿದ್ದಾರೆ. ಇದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿವರಿಸಿ ಸಂಬಂಧಪಟ್ಟ ದಾಖಲೆ ಪ್ರದರ್ಶಿಸಿದರು.

ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಬಿಡಿಸಿಸಿ ನಿರ್ದೇಶಕ ಅರವಿಂದ ಪಾಟೀಲ ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸಹಕಾರ ಸಂಘಗಳ ನಿಯಮದ ಪ್ರಕಾರ 3 ಸಭೆಗಳಲ್ಲಿ ಭಾಗವಹಿಸದ ಸದಸ್ಯರಿಗೆ ಮತದಾನದ ಅರ್ಹತೆಯಿಲ್ಲ. ಆದರೆ ಗೋಧೋಳಿ ಸಂಘದ ಸದಸ್ಯರೊಬ್ಬರು ಎಲ್ಲ ಸಭೆಗಳಲ್ಲಿ ಭಾಗವಹಿಸಿದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ಮತದಾನದಿಂದ ದೂರ ಇಡಲಾಗಿದೆ. ಅರವಿಂದ ಅವರು ಈಗಾಗಲೇ ತಾಲೂಕಿನಲ್ಲಿ ಬಲಾಢ್ಯವಾಗಿದ್ದ ಎಂಇಎಸ್ ವಿಭಜಿಸಿ ಇಬ್ಭಾಗವಾಗಿ ಮಾಡಿದ್ದಾರೆ. ಈಗ ಬಿಜೆಪಿಯಲ್ಲೂ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಈ ಎಲ್ಲ ಸಂಗತಿಗಳನ್ನು ಪಕ್ಷದ ವರಿಷ್ಠರ ಮುಂದೆ ಸಲ್ಲಿಸಲಾಗುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಾಂಬೋಟಿ-ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ನಿರ್ದೇಶಕರು ಇದ್ದರು