ಕನ್ನಡಪ್ರಭ ವಾರ್ತೆ ಹೊಸಪೇಟೆ
ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ರಾಜಾಪುರ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಮರಂ ಮಣ್ಣು ಸಾಗಣೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ನೀಡಿದರು. ಇದರ ಬೆನ್ನಲ್ಲೇ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ವೇಳೆ ಗ್ರಾಮ ಆಡಳಿತಾಧಿಕಾರಿ ಪ್ರತಾಪ್ ಕಳೆದ ಆರು ತಿಂಗಳಲ್ಲಿ ಮಣ್ಣು ತೆಗೆಯುತ್ತಿರುವ ಬಗ್ಗೆ ಕಂದಾಯ ನಿರೀಕ್ಷಕರಿಗೆ ಹಾಗೂ ತಹಸೀಲ್ದಾರ್ ಶೃತಿ ಅವರಿಗೆ ವರದಿ ಮಾಡಲಾಗಿದೆ ಎಂದು ಉತ್ತರಿಸಿದಾಗ ಸ್ಥಳದಲ್ಲಿದ್ದ ತಹಸೀಲ್ದಾರರಿಗೂ ಗೊತ್ತಾಗದಿರುವುದಕ್ಕೆ ಉಪಲೋಕಾಯುಕ್ತರು ಆಶ್ಚರ್ಯ ವ್ಯಕ್ತಪಡಿಸಿದರು.
ಕಲ್ಲಹಳ್ಳಿ, ರಾಜಾಪುರದ ಪಟ್ಟಾ ಜಮೀನು ಸರ್ವೆ ನಂ.144ರಲ್ಲಿ ವಲಿ ನಾಯ್ಕಗೆ ಸೇರಿದ 4 ಎಕರೆ 81 ಸೆಂಟ್ಸ್ ಜಾಗದಲ್ಲಿ ಮರಂ ಮಣ್ಣು ಅಗೆಯಲಾಗಿದೆ. 4 ಲಕ್ಷ 80 ಸಾವಿರ ರು. ಮೌಲ್ಯದ 9600 ಮೆಟ್ರಿಕ್ ಟನ್ ಮರಂ ಮಣ್ಣು ಅಗೆಯಲಾಗಿದೆ, ಹಿಟಾಚಿ ಬಳಸಿ ಅಗೆಯಲಾಗಿದ್ದು, ವಲಿ ನಾಯ್ಕ ಹಾಗೂ ಹಿಟಾಚಿ ಆಪರೇಟರ್ ವಿರುದ್ಧ ಕ್ರಮವಹಿಸಬೇಕು ಎಂದು ಗ್ರಾಮೀಣ ಠಾಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಕೀರ್ತಿಕುಮಾರ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ತರಾಟೆ:
ಸರ್ಕಾರದ ಆಸ್ತಿ ಸಂರಕ್ಷಣೆ ಮಾಡಬೇಕಾದವರು ಅಧಿಕಾರಿಗಳಾಗಿದ್ದು, ಮುಂದಿನ ಭವಿಷ್ಯಕ್ಕೆ ಚಿಪ್ಪು ನೀಡಲು ಹೊರಟಿದ್ದೀರಾ? ಪಕ್ಕದಲ್ಲಿ ಅರಣ್ಯವಿದೆ, ಇದೆಲ್ಲಾ ತೆಗೆದ ನಂತರ ಅರಣ್ಯ ಭೂಮಿಯಲ್ಲಿ ಮಣ್ಣು ತೆಗೆಯುತ್ತಾನೆ. ರಸ್ತೆ ನಿರ್ಮಾಣ ಮಾಡಿಕೊಂಡು ದೂಳಾಗದಂತೆ ಪ್ರತಿನಿತ್ಯ ರಸ್ತೆಗೆ ನೀರು ಹಾಕಿದ್ದನ್ನು ಗಮನಿಸಿದರೆ, ಇದನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ. ಈ ಮಣ್ಣನ್ನು ತೆಗೆದು ಹೊಸಪೇಟೆಗೆ ವಿವಿಧ ಬಡಾವಣೆಗಳಿಗೆ ಸಾಗಿಸಲಾಗುತ್ತಿದೆ ಎಂದು ಮಾಹಿತಿ ಇದ್ದು, ಕಂದಾಯ ಅಧಿಕಾರಿಗಳು ಭೂ ಸಂರಕ್ಷಣಾ ಕಾಯ್ದೆಯಡಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಿನರಲ್ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸೂಚಿಸಿದರು.ನಗರದ ಉಪಕಾರಾಗೃಹಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನೀಡಲಾಗುತ್ತಿರುವ ಆಹಾರ, ಕುಡಿಯುವ ನೀರು ಮತ್ತು ಕೈದಿಯ ಪರವಾಗಿ ವಾದ ಮಾಡಲು ನೇಮಕ ಮಾಡಿಕೊಂಡಿರುವ ವಕೀಲರುಗಳ ಬಗ್ಗೆ ಮಾಹಿತಿ ಪಡೆದು, ವಿಚಾರಣಾಧೀನ ಕೈದಿಗಳಿಬ್ಬರು ವಕೀಲರನ್ನು ನೇಮಕ ಮಾಡಿಕೊಂಡಿಲ್ಲ ಎಂದಾಗ ಸರ್ಕಾರಿ ವಕೀಲರನ್ನು ನೇಮಕ ಮಾಡಲು ಜೈಲು ಅಧಿಕಾರಿಗಳಿಗೆ ಸೂಚಿಸಿದರು.