ಜ್ಞಾನ, ಸಾಮರ್ಥ್ಯದಿಂದ ಉದ್ಯೋಗ ಹೊಂದಿ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

KannadaprabhaNewsNetwork | Published : Mar 16, 2025 1:47 AM

ಸಾರಾಂಶ

ಜ್ಞಾನ, ಕೌಶಲ್ಯ, ಸಾಮರ್ಥ್ಯವಿಲ್ಲದಿದ್ದರೆ ಉದ್ಯೋಗ ಕ್ಷೇತ್ರ ಪ್ರವೇಶಿಸುವುದಕ್ಕೆ ಆಗುವುದಿಲ್ಲವೆಂಬುದಕ್ಕೆ ಅಮೆರಿಕದಿಂದ ಈಚೆಗೆ ಸುಮಾರು 150ಕ್ಕೂ ಹೆಚ್ಚು ಭಾರತೀಯರು ವಾಪಸ್ಸು ಬಂದಿರುವುದೇ ಸಾಕ್ಷಿಯಾಗಿದ್ದು, ಶಿಕ್ಷಣದ ಜೊತೆಗೆ ಕೌಶಲ್ಯ, ಭಾಷಾ ಜ್ಞಾನ, ಸಂಹವನ ಕಲೆಯನ್ನೂ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿ, ಯುವ ಜನರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.

ಜಿಲ್ಲಾ ಮಟ್ಟದ ಉದ್ಯೋಗ ಮೇಳ । ಯಾವುದೇ ಕೆಲಸ ಮಾಡುವ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜ್ಞಾನ, ಕೌಶಲ್ಯ, ಸಾಮರ್ಥ್ಯವಿಲ್ಲದಿದ್ದರೆ ಉದ್ಯೋಗ ಕ್ಷೇತ್ರ ಪ್ರವೇಶಿಸುವುದಕ್ಕೆ ಆಗುವುದಿಲ್ಲವೆಂಬುದಕ್ಕೆ ಅಮೆರಿಕದಿಂದ ಈಚೆಗೆ ಸುಮಾರು 150ಕ್ಕೂ ಹೆಚ್ಚು ಭಾರತೀಯರು ವಾಪಸ್ಸು ಬಂದಿರುವುದೇ ಸಾಕ್ಷಿಯಾಗಿದ್ದು, ಶಿಕ್ಷಣದ ಜೊತೆಗೆ ಕೌಶಲ್ಯ, ಭಾಷಾ ಜ್ಞಾನ, ಸಂಹವನ ಕಲೆಯನ್ನೂ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿ, ಯುವ ಜನರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಐಟಿಐ ಕಾಲೇಜಿನ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯ ಅಭಿವೃದ್ಧಿ ಮಿಷನ್‌ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ರಾಜ್ಯವಷ್ಟೇ ಅಲ್ಲ, ದೇಶ, ವಿದೇಶಗಳಲ್ಲೂ ಸಾಕಷ್ಟು ಉದ್ಯೋಗಾವಕಾಶವಿದ್ದು, ಪದವಿ ಜೊತೆಗೆ ಉತ್ತಮ ಕೌಶಲ್ಯವನ್ನೂ ಮೈಗೂಡಿಸಿಕೊಂಡರೆ ಉದ್ಯೋಗಾವಕಾಶದ ಬಾಗಿಲು ತೆರೆಯುತ್ತವೆ ಎಂದರು.

ದಾವಣಗೆರೆ ಮೇಳದಲ್ಲಿ 69ಕ್ಕೂ ಹೆಚ್ಚು ಕಂಪನಿಗಳು, 11 ಐಟಿ ಕಂಪನಿ ಭಾಗವಹಿಸಿವೆ. 5413 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದು, ಇದರಲ್ಲಿ 2971 ಯುವಕರು, 2427 ಯುವತಿಯರು, 13 ತೃತೀಯ ಲಿಂಗಿಗಳ, 395 ಅಂಗವಿಕಲ ಅಭ್ಯರ್ಥಿಗು, ಆಫ್‌ ಲೈನ್ ಮೂಲಕ 2500 ಅಭ್ಯರ್ಥಿಗಳು ಉದ್ಯೋಗ ಬಯಸಿ, ಮೇಳದಲ್ಲಿ ಭಾಗವಹಿಸಿದ್ದಾರೆ. ಮೇ‍ಳವು ನಿರೀಕ್ಷೆಯನ್ನು ಮೀರಿ ಯಶಸ್ಸು ಕಂಡಿದೆ ಎಂದು ಹೇಳಿದರು.

ವಿದೇಶಿ ಉದ್ಯೋಗಕ್ಕೆ ಸರ್ಕಾರವೇ ಖರ್ಚು ಭರಿಸತ್ತೆ: ಶಿವಕಾಂತಮ್ಮ:ವಿದೇಶದಲ್ಲಿ ಉದ್ಯೋಗ ಮಾಡಲಿಚ್ಛಿಸುವ ಅಭ್ಯರ್ಥಿಗಳಿಗೆ ಹೇರಳ ಅವಕಾಶಗಳಿದ್ದು, ಇಂದೇ ತೆರಳುವವರಿಗೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಖರ್ಚು ಭರಿಸುವ ಜೊತೆಗೆ ಉಚಿತವಾಗಿ ಕಳಿಸಿ, ಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ್ ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮವೆಂದು ಹುಡುಕಿದರೆ ಯುಎ, ಬೆಲ್ಜಿಯಂ ಸೇರಿದಂತೆ ವಿವಿಧ ದೇಶಗಳಲ್ಲಿ ಉದ್ಯೋಗಾಕವಾಶವಿರುವ ಮಾಹಿತಿ ಸಿಗುತ್ತದೆ ಎಂದರು. ಹೀಗೆ ವಿದೇಶಕ್ಕೆ ಹೋಗಲಿಚ್ಛಿಸುವ ಯುವಕ-ಯುವತಿಯರಿದ್ದರೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ ವೀಸಾ, ಟಿಕೆಟ್, ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿ, ಉಚಿತವಾಗಿ ಅಂತಹವರಿಗೆ ವಿದೇಶಕ್ಕೆ ಕಳಿಸಲಾಗುವುದು ಎಂದು ಹೇಳಿದರು.ಬಳ್ಳಾರಿ, ತುಮಕೂರು, ಮಂಡ್ಯ, ಬೀದರ್ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಮೇಳ ಆಯೋಜಿಸಿದ್ದು, ಇದೀಗ ಇಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಸಹ ನಿಗಮದಿಂದ ಆಯೋಜನೆ ಮಾಡಲಿದ್ದೇವೆ ಎಂದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶಿವಕುಮಾರ ಮಲ್ಲಾಡದ, ಐಟಿಐ ಕಾಲೇಜು ಪ್ರಾಚಾರ್ಯ ಎನ್.ಏಕನಾಥ, ರೇಷ್ಮಾ ಕೌಸರ್ ಇತರರು ಇದ್ದರು.

Share this article