ಮಹಿಳೆಯರು, ಮಕ್ಕಳ ಅನೈತಿಕ ಸಾಗಣೆ ಸಲ್ಲದು: ಡಿವೈಎಸ್‍ಪಿ ಸುರೇಶ್‌

KannadaprabhaNewsNetwork |  
Published : Feb 22, 2024, 01:50 AM IST
ಪೊಟೋ: 21ಎಸ್‌ಎಂಜಿಕೆಪಿ02ಶಿವಮೊಗ್ಗ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಬುಧವಾರ ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಡಿವೈಎಸ್ಪಿ ಸುರೇಶ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವಲ್ಲಿ ಇರುವ ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳನ್ನು ಈ ಮೋಸದ ಬಲೆಯಿಂದ ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಡಿವೈಎಸ್‌ಪಿ ಸುರೇಶ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವಲ್ಲಿ ಇರುವ ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಡಿವೈಎಸ್‌ಪಿ ಸುರೇಶ್ ಹೇಳಿದರು.

ನಗರದ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಕ್ಷೇತ್ರಮಟ್ಟದ ವಿವಿಧ ಇಲಾಖೆಗಳ ಭಾಗೀದಾರರಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳನ್ನು ಈ ಮೋಸದ ಬಲೆಯಿಂದ ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಜಿಲ್ಲೆಯಲ್ಲಿ ಸ್ಪಾ, ಸಲೂನ್‍ಗಳ ಬಗ್ಗೆ ದೂರುಗಳು ಬರುತ್ತಿದ್ದು, ಕಾಯ್ದೆ ಅನುಷ್ಠಾನ ವೇಳೆ ಯಾರನ್ನು ಆರೋಪಿಗಳೆಂದು, ಸಂತ್ರಸ್ತರೆಂದು ಪರಿಗಣಿಸಬೇಕು ಹೀಗೆ ಕೆಲ ಗೊಂದಲಗಳು ಎದುರಾಗುತ್ತವೆ. ಆದ್ದರಿಂದ ಎಲ್ಲರೂ ಕಾಯ್ದೆಯನ್ನು ಸಮರ್ಪಕವಾಗಿ ಅರಿತು, ಎಷ್ಟೇ ಸವಾಲುಗಳಿದ್ದರೂ ಅದನ್ನು ಎದುರಿಸಿ, ಮಹಿಳೆಯರು ಮತ್ತು ಮಕ್ಕಳನ್ನು ಅನಾಹುತಗಳಿಂದ ರಕ್ಷಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯ, ಅಪರಾಧಗಳು ನಡೆಯುತ್ತಿವೆ. ಜೀತ, ಕೃಷಿ, ಕಾರ್ಖಾನೆ ಕೆಲಸ, ಅಂಗಾಂಗ ಮಾರಾಟ, ಒಳ ಹಾಗೂ ಹೊರದೇಶಗಳಲ್ಲಿ ದತ್ತು, ಲೈಂಗಿಕ ಚಟುವಟಿಕೆ, ಭಿಕ್ಷಾಟನೆ, ಮಾದಕ ವಸ್ತು ಸಾಗಾಣಿಕೆ, ಕಳ್ಳ ಸಾಗಾಣಿಕೆ, ಸೂಕ್ಷ್ಮ ಕೆಲಸಗಳು, ಮದುವೆ ವಿಚಾರ, ಬಾರ್‌ನಲ್ಲಿ ನೃತ್ಯ ಹೀಗೆ ಹಲವಾರು ಕಾರಣಗಳಿಗೆ ಮಹಿಳೆಯರು, ಮಕ್ಕಳ ಅನೈತಿಕ ಸಾಗಣೆ ಹೆಚ್ಚುತ್ತಿದೆ. ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು, ಮಕ್ಕಳ ಅನೈತಿಕ ಸಾಗಾಣಿಕ ಸಹ ಅಧಿಕವಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.

ಎಸ್‍ಎಂಎಸ್‍ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ ಮಾತನಾಡಿ, ಯಾವುದಕ್ಕಾಗಿ ಕೃತ್ಯಗಳು ನಡೆಯುತ್ತಿದೆ ಎಂಬ ಮೂಲ ಸಮಸ್ಯೆ ಗುರುತಿಸಿ ಪರಿಹಾರ ಕಂಡುಕೊಂಡಲ್ಲಿ ಅಪರಾಧಗಳ ಪ್ರಮಾಣ ತಗ್ಗುವುದು. ಮೂಲ ಸಮಸ್ಯೆಗೆ ಪರಿಹಾರ ಕಷ್ಟವಾದರೂ ಪ್ರಯತ್ನ ಬೇಕು ಎಂದು ತಿಳಿಸಿದರು.

ಶಿವಮೊಗ್ಗ ಸಿಡಿಪಿಒ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವುದು ಐಟಿಪಿಎ 1956 ಕಾಯ್ದೆ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯು ಅನೇಕ ಕಾರಣಗಳಿಗೆ ಆಗುತ್ತಿದ್ದು, ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು ಹಾಗೂ ಸುಳ್ಳು ದತ್ತು, ಲೈಂಗಿಕ ಚಟುವಟಿಕೆಯಂತ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಸಾಗಾಣಿಕೆ ನಡೆಯುತ್ತಿದ್ದು, ಇದೊಂದು ವ್ಯವಸ್ಥಿತ ಅಪರಾಧವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಪೊಲೀಸ್‌ ಇಲಾಖೆಯ ರೈಟರ್ ಸೋಮಶೇಖರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಸಂಯೋಜಕ ತಾಜುದ್ದೀನ್ ಖಾನ್‌, ಸಾಗರ ಸಿಡಿಪಿಒ ಸಂತೋಷ್ ಕುಮಾರ್ ಮತ್ತಿತರರು ಇದ್ದರು.

- - - -21ಎಸ್‌ಎಂಜಿಕೆಪಿ02:

ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಡಿವೈಎಸ್ಪಿ ಸುರೇಶ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ