ಗಂಗಾವತಿ: ಕೆರೆ ತುಂಬಿಸುವ ಯೋಜನೆಗೆ ಅಳವಡಿಸಿರುವ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಳವಡಿಸಿದ್ದ ಪೈಪ್‌ಗಳನ್ನು ಕಿತ್ತೆಸೆದು ಎಚ್ಚರಿಕೆ ನೀಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ದೇವಘಾಟ್‌ನ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಮುಕ್ಕುಂಪ, ಹಿರೇಬೆಣಕಲ್, ಲಿಂಗದಳ್ಳಿ, ಚಿಕ್ಕಬೆಣಕಲ್ ಹಾಗೂ ವೆಂಕಟಗಿರಿ ಗ್ರಾಮಗಳ ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯಿಂದ ಗ್ರಾಮಗಳ ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಸಮಸ್ಯೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ಯೋಜನೆಯ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ನೀರು ಬಳಸುತ್ತಿರುವುದರಿಂದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರದಿಂದ ಕಾರ್ಯಾಚರಣೆ: ತುಂಗಭದ್ರ ಎಡದಂಡೆ ಕಾಲುವೆ ಹಾಗೂ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ನಿಂದ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವವರ ವಿರುದ್ಧ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವರೆಗೆ 40ಕ್ಕೂ ಹೆಚ್ಚು ಅಕ್ರಮ ಪೈಪ್‌ಗಳನ್ನು ಕಿತ್ತೆಸೆದು ತೆರವುಗೊಳಿಸಿದ್ದಾರೆ.ಕಾಲುವೆಯ ಅಚ್ಚುಕಟ್ಟು ಪ್ರದೇಶದ ದಾಸನಾಳ, ಕೇಸರಹಟ್ಟಿ, ಚಿಕ್ಕಡಂಕನಕಲ್, ಮೈಲಾಪುರ, ಕಾರಟಗಿ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಲಭಿಸಿದೆ. ಕೆಲವು ಪ್ರಭಾವಿ ರೈತರೂ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಭತ್ತ ನಾಟಿ ಮಾಡಿಕೊಂಡು ನೀರು ಹಾಯಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ದೂರು ನೀಡಿ ಅಧಿಕಾರಿಗಳನ್ನು ಕರೆಸಿರುವುದರಿಂದ ರೈತರಿಗೆ ಕಿರುಕುಳವಾಗುತ್ತಿದೆ ಎಂದು ಕೆಲವು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಾಗ್ಯುದ್ಧ ನಡೆಯಿತು.
ಕೆರೆ ತುಂಬಿಸುವ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದಾಗಿದ್ದು, ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ನೀರು ಬಳಸುವುದರಿಂದ ಯೋಜನೆಯ ಮೂಲ ಉದ್ದೇಶವೇ ಹಾಳಾಗಲಿದೆ. ಹೀಗಾಗಿ ಅಕ್ರಮ ನೀರು ಬಳಕೆ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.