ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು, ಹುನಗುಂದ ಮತಕ್ಷೇತ್ರದ ಮುರುಡಿ ಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಗಂಭೀರ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. 18 ವರ್ಷ ತುಂಬದ ಅಪ್ರಾಪ್ತರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಬೇರೆ ಜಿಲ್ಲೆಗಳ ಹಾಗೂ ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳ ಮತದಾರರನ್ನು ಹುನಗುಂದ ಮತಕ್ಷೇತ್ರದ ಪಟ್ಟಿಗೆ ಅಕ್ರಮವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದರು.
ಒಬ್ಬನೇ ವ್ಯಕ್ತಿಯ ಹೆಸರನ್ನು ಬೇರೆ ಬೇರೆ ಮತಗಟ್ಟೆಗಳಲ್ಲಿ ಸೇರಿಸಿರುವ ಉದಾಹರಣೆಗಳು ಸಾಕಷ್ಟು ಕಂಡುಬಂದಿವೆ. ಇಂತಹ ಅಕ್ರಮಗಳು ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ತರುವಂತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಕುಗ್ಗಿಸುವ ಕೆಲಸವಾಗಿದೆ ಎಂದು ಕಿಡಿಕಾರಿದರು. ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ಬೇಜವಾಬ್ದಾರಿತನದಿಂದ ಮತದಾರರ ಪಟ್ಟಿಯನ್ನು ತಿರುಚುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಉದ್ದೇಶಪೂರ್ವಕವಾದ ಅಕ್ರಮವಾಗಿದೆ ಎಂದು ದೊಡ್ಡನಗೌಡ ಪಾಟೀಲ ಆರೋಪಿಸಿದರು.ಮತದಾರರ ಪಟ್ಟಿಯಿಂದ ಮೃತರಾದವರ ಹೆಸರುಗಳು ಇನ್ನೂ ಕೈಬಿಡದೆ ಉಳಿದಿರುವುದು, ಕ್ಷೇತ್ರದಿಂದ ದೂರವಿರುವ ಹಾಗೂ ನಕಲಿ ವಿಳಾಸದ ಮತದಾರರನ್ನು ಸೇರಿಸಿರುವುದು, ಖೊಟ್ಟಿ (ಡಮ್ಮಿ) ಮತದಾರರನ್ನು ಉಳಿಸಿಕೊಂಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಎಲ್ಲ ಅಕ್ರಮ ಮತದಾರರನ್ನು ತಕ್ಷಣವೇ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಇನ್ನು ಮುಂದೆ ಉಪಚುನಾವಣೆ ನಡೆಯುವ ಸಾಧ್ಯತೆ ಇರುವ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಲ್ಲೂ ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ವಿಶೇಷ ತೀವ್ರ ಪರಿಶೀಲನಾ ಅಭಿಯಾನ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಮುಖಂಡ ಡಾ.ಎಂ.ಎಸ್.ದಡ್ಡೇನವರ ಸೇರಿದಂತೆ ಬಾಗಲಕೋಟೆ- ಹುನಗುಂದ ಮತ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.