ಕಲಾಂ ಸಂಸ್ಥೆ ಮೂಲಕ ಅಕ್ರಮ: ಲಕ್ಷಾಂತರ ರು.ವಾಪಸ್

KannadaprabhaNewsNetwork | Published : Jan 4, 2025 12:34 AM

ಸಾರಾಂಶ

ಅಬ್ದುಲ್ ಕಲಾಂ ಸಂಸ್ಥೆ ಶಿಕ್ಷಣ ಇಲಾಖೆ ಮೂಲಕ ಯೋಗ, ಕಂಪ್ಯೂಟರ್ ಅತಿಥಿ ಶಿಕ್ಷಕರು ಮತ್ತು ಅಟೆಂಡರ್ ನೇಮಕಾತಿ ವಿಚಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಸಂಬಂಧ ಕನ್ನಡಪ್ರಭ ವರದಿ ಪ್ರಕಟಗೊಂಡ ಬೆನ್ನಲ್ಲೆ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದವರು ಹಲವರಿಗೆ ಲಕ್ಷಾಂತರ ಹಣ ಹಿಂತಿರುಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಎನ್.ನಾಗೇಂದ್ರಸ್ವಾಮಿಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಅಬ್ದುಲ್ ಕಲಾಂ ಸಂಸ್ಥೆ ಶಿಕ್ಷಣ ಇಲಾಖೆ ಮೂಲಕ ಯೋಗ, ಕಂಪ್ಯೂಟರ್ ಅತಿಥಿ ಶಿಕ್ಷಕರು ಮತ್ತು ಅಟೆಂಡರ್ ನೇಮಕಾತಿ ವಿಚಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಸಂಬಂಧ ಕನ್ನಡಪ್ರಭ ವರದಿ ಪ್ರಕಟಗೊಂಡ ಬೆನ್ನಲ್ಲೆ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದವರು ಹಲವರಿಗೆ ಲಕ್ಷಾಂತರ ಹಣ ಹಿಂತಿರುಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಚಾ.ನಗರ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಕಲಾಂ ಫೌಂಡೇಷನ್ ನೀಡಿದ ಮನವಿ ಪರಿಗಣಿಸಿ 29-72024ರಲ್ಲಿ 12ಷರತ್ತುಗಳನ್ನು ವಿಧಿಸಿ ಈ ಅನುಮತಿ 2024 ಮತ್ತು 2025ನೇ ಸಾಲಿಗೆ ಮಾತ್ರ ಸೀಮಿತ ಎಂದು ಆದೇಶಿಸಿದ್ದಾರೆ. ಕಲಾಂ ಸಂಸ್ಥೆ ಅನುಮತಿ ಪಡೆವ ವೇಳೆ ನೇಮಕಗೊಂಡವರಿಗೆ ಸಂಸ್ಥೆ ವತಿಯಿಂದ ಉಚಿತವಾಗಿ 10ರಿಂದ 14ಸಾವಿರದತನಕ ಸಂಬಳ ನೀಡುತ್ತೇವೆ ಎಂಬುದಾಗಿ ಒಪ್ಪಿಕೊಂಡಿದ್ದು, ಅದರಂತೆ ಕೆಲವರಿಗೆ 8ದಿನ, 1ತಿಂಗಳ ಸಂಬಳ ಪಾವತಿಸಿದ್ದಾರೆ, ಆದರೆ ನೇಮಕಕ್ಕೂ ಮುನ್ನ ಸಂಸ್ಥೆ ಹೆಸರೇಳಿಕೊಂಡು ಶ್ರೀಕಂಠ, ಕೃಷ್ಣ ಇನ್ನಿತರರು ಪ್ರತಿ ಫಲಾನುಭವಿಗಳಿಂದ 50ಸಾವಿರದಿಂದ ಒಂದು ಲಕ್ಷದ ಅರವತ್ತು ಸಾವಿರದ ತನಕ ಅಕ್ರಮವಾಗಿ ವಸೂಲಿ ಮಾಡಿದ್ದು ನಿಮ್ಮ ಕೆಲಸ ಅವಧಿ 5ವರ್ಷಕ್ಕೆ ಮುಂದುವರೆಯಲಿದೆ, 5ವರ್ಷದ ತನಕ ನಾವೇ ಸಂಬಳ ಪಾವತಿಸುತ್ತೆವೆ, ನಿಮ್ಮ ಉದ್ಯೋಗ ಕಾಯಂ ಆಗುತ್ತೆ ಎಂಬುದಾಗಿ ನಂಬಿಸಿದ್ದಾರೆ.

ಈ ಮೊದಲೆ ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದವರು ಈ ಸಂಸ್ಥೆಯ ಪದಾಧಿಕಾರಿಗಳ ಆಮೀಷಕ್ಕೆ ಒಳಗಾಗಿ ಹಣ ನೀಡಿದ್ದಾರೆ. ಹಣ ನೀಡಿದವರಿಗೆ ಎಷ್ಟು ತಿಂಗಳ ತನಕ ಸಂಸ್ಥೆ ಸಂಬಳ ನೀಡುತ್ತೆ ಎಂಬುದೆ ಈಗಿರುವ ಯಕ್ಷ ಪ್ರಶ್ನೆಯಾಗಿದೆ. ಇನ್ನು ಆದೇಶ ನೀಡಿದ ಡಿಡಿಪಿಐ ಅವರೇ ಈ ಉದ್ಯೋಗ ಕಾಯಂ ಮಾಡಲಾಗುತ್ತದೆಯೇ ಎಂಬುದಕ್ಕೆ ಉತ್ತರ ನೀಡಬೇಕಿದೆ. ಈ ಸಂಬಂಧ ಸುಧೀರ್ಘವಾಗಿ ಕನ್ನಡಪ್ರಭ ವರದಿ ಪ್ರಕಟಗೊಂಡ ಬೆನ್ನಲ್ಲೆ ಸಂಸ್ಥೆಯ ಸಿಬ್ಬಂದಿಗೆ ಹಲವರಿಗೆ ಹಣ ವಾಪಸ್ ಮಾಡಿದ್ದಾರೆ.

ಇವರಿಂದ ಆದೇಶ ನೀಡುವ ಕುರಿತು ಲಕ್ಷಾಂತರ ರು.ಗಳನ್ನು ಪಡೆಯಲಾಗಿತ್ತು. ಆದರೆ ಆದೇಶ ನೀಡದ ಹಿನ್ನೆಲೆ ಕೆಲವರು ಹಣ ನೀಡಿವರನ್ನೇ ಪ್ರಶ್ನೆಸಿದ ಬೆನ್ನಲ್ಲೆ ಜಯಮ್ಮ ಎಂಬವರಿಗೆ 90ಸಾವಿರ ವಾಪಸ್ ನೀಡಿದ್ದು ಇನ್ನು ಸಹಾ ಅವರಿಗೆ ₹10ಸಾವಿರ ಬಾಕಿ ನೀಡಬೇಕಿದೆ. ಅದೇ ರೀತಿಯಲ್ಲಿ ಹನೂರು ಕ್ಷೇತ್ರ ವ್ಯಾಪ್ತಿಯ ದೊಮ್ಮನದೊಡ್ಡಿ ಗ್ರಾಮದ ಮಹಿಳೆಯೊಬ್ಬರಿಂದಲೂ ಒಂದು ಲಕ್ಷದ ಇಪ್ಪತ್ತು ಸಾವಿರ ಪಡೆದಿದ್ದು ಅವರಿಗೆ 1ಲಕ್ಷ ಹಿಂತಿರುಗಿಸಿದ್ದಾರೆ, ಇನ್ನು ಇಪ್ಪತ್ತು ಸಾವಿರ ವಾಪಸ್ ನೀಡಬೇಕಿದೆ. ಇನ್ನು ಅದೇ ಗ್ರಾಮದ ಮತ್ತೊಬ್ಬರಿಂದಲೂ 1ಲಕ್ಷ ಪಡೆದಿದ್ದು ಅವರಿಗೆ ಅಲ್ಪ ಪ್ರಮಾಣದ ಹಣ ನೀಡಿರುವ ಘಟನೆ ಬೆಳಕಿಗೆ ಬಂದಿದೆ, ಅದೇ ರೀತಿ ಬಂಡಳ್ಳಿಯ ಮಹಿಳೆಯೊಬ್ಬರಿಂದ 1ಲಕ್ಷಕ್ಕೆ ಆದೇಶ ನೀಡುವ ಮಾತುಕತೆ ನಡೆಸಿ 40ಸಾವಿರ ಪಡೆದಿದ್ದು ಅತ್ತ ಆದೇಶವೂ ಇಲ್ಲ, ಇತ್ತ ಹಣವನ್ನು ಹಿಂತಿರುಗಿಸಿಲ್ಲ ಎನ್ನಲಾಗಿದ್ದು ಬಂಡಳ್ಳಿ ಪ್ರಕರಣದಲ್ಲಿ ಶುಕ್ರವಾರದೊಳಗೆ ಹಣ ವಾಪಸ್ ನೀಡದ ಪಕ್ಷದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅಜ್ಜಿಪುರ ಗ್ರಾಮದಿಂದಲೇ 10ಮಂದಿ ಆಯ್ಕೆ:ಅತಿಥಿ ಶಿಕ್ಷಕ ಹುದ್ದೆಗೆ ಅಜ್ಜಿಪುರ ಗ್ರಾಮವೊಂದರಿಂದಲೇ 10ಕ್ಕೂ ಅಧಿಕ ಮಂದಿಯನ್ನು ಆಯ್ಕೆ ಮಾಡಿಕೊಂಡು ವಿವಿಧ ಶಾಲೆಗಳಿಗೆ ನಿಯೋಜಿಸಲಾಗಿದ್ದು ಇಲ್ಲೂ ಸಹಾ ಸಾಕಷ್ಟು ಅಧ್ವಾನವನ್ನು ಸಂಸ್ಥೆ ನಡೆಸಿದ್ದು ಇದಕ್ಕೆ ಶಿಕ್ಷಣ ಇಲಾಖೆಯ ಸಿಬ್ಬಂದಿಯೊಬ್ಬರು ಸಾಥ್ ನೀಡಿದ್ದಾರೆ ಎಂದು ಬಲ್ಲಮೂಲಗಳು ಖಚಿತಪಡಿಸಿವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಟೆಂಡರ್ ನೇಮಕಾತಿಗೆ ಡಿಡಿಪಿಐ ಆದೇಶ ನೀಡದಿದ್ದರೂ ಸಹಾ ಕಲಾಂ ಸಂಸ್ಥೆ ಅಟೆಂಡರ್‌ಗಳನ್ನು ನಿಯಮ ಮೀರಿ ನೇಮಿಸಿಕೊಂಡಿದ್ದು ಇದಕ್ಕೆ ಶಿಕ್ಷಣ ಇಲಾಖೆಯ ಕೆಲವರು ಸಾಥ್ ನೀಡಿರುವುದು, ಅಡೆಂಡರ್‌ಗಳಾಗಿ ನೇಮಕಗೊಂಡವರನ್ನು ಆಯಾ ಶಾಲೆಗೆ ನೇಮಿಸಿಕೊಳ್ಳುವ ಮೂಲಕ ಅಕ್ರಮಕ್ಕೆ ಸಾಥ್ ನೀಡಿರುವುದು ಸಾರ್ವಜನಿಕ ಹಾಗೂ ಸ್ಥಳೀಯ ಶಾಸಕ ಮಂಜುನಾಥ್ ಅವರ ಅಪಸ್ವರಕ್ಕೂ ಕಾರಣವಾಗಿದೆ. ಇನ್ನು ಅಕ್ರಮವಾಗಿ ಅಟೆಂಡರ್ ನೇಮಕಮಾಡಿಕೊಳ್ಳಲಾಗಿದ್ದು ಅವರನ್ನು ಆಯಾ ಶಾಲೆಗಳಿಂದ ಬಿಡುಗಡೆಗೊಳಿಸಿ ಎಂಬ ಹನೂರು ಬಿಇಒ ಅವರ ಆದೇಶವೂ ಸಹಾ ಸಾಕಷ್ಟು ಅಕ್ರಮ ನಡೆದಿದೆ, ನಿಯಮ ಮೀರಿ ನೇಮಕಾತಿಯಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದ್ದು ಈ ವಿಚಾರ ಶಿಕ್ಷಣದ ವಲಯದಲ್ಲೂ ಸಾಕಷ್ಟು ಚರ್ಚಾಸ್ಪದವಾಗಿದೆ.

ಡಿಡಿಪಿಐ ದಿಟ್ಟ ಕ್ರಮಕೈಗೊಳ್ಳುತ್ತಾರಾ?ಚಾ.ನಗರ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಅಟೆಂಟರ್ ನೇಮಕಾತಿಗೆ ಅಬ್ದುಲ್ ಕಲಾಂ ಸಂಸ್ಥೆಗೆ ಅನುಮತಿ ನೀಡಿಲ್ಲ, ಹಾಗಿದ್ದರೂ ನೇಮಕಾತಿ ನಡೆದಿದೆ. ಅಲ್ಲದೆ ನಿಯಮ ಮೀರಿ , ಆದೇಶ ಉಲ್ಲಂಘಿಸಿ ನೇಮಕಗೊಳಿಸಿದ ಫಲಾನುಭವಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ಸಹಾ ಅಕ್ಷಮ್ಯ ಅಪರಾಧ, ಇಂಥದ್ದೊಂದು ದಂಧೆಗೆ ಸ್ವತಃ ಡಿಡಿಪಿಐ ಅವರು ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ನೀಡಿರುವುದೆ ಕಾರಣ ಎನ್ನಲಾಗಿದ್ದು ಈ ಗಂಭೀರ ಅಕ್ರಮ ನಡೆದಿರುವ ಪ್ರಕರಣವನ್ನು ಡಿಡಿಪಿಐ ಯಾವ ರೀತಿ ಎದುರಿಸುತ್ತಾರೆ, ನೊಂದವರಿಗೆ ಯಾವ ರೀತಿ ನ್ಯಾಯ ದೊರಕಿಸಿಕೊಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.ಯಾರು, ಯಾರಿಗೆ ಹಣ ನೀಡಿದ್ದಾರೆ ಎಂಬುದರ ಕುರಿತು ದಾಖಲೆ ಸಮೇತ ಮಾಹಿತಿ ಸಲ್ಲಿಸಿದರೆ ನಾನು ಆ ಸಂಸ್ಥೆ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮವಹಿಸುವೆ. ಅಬ್ದುಲ್ ಕಲಾಂ ಸಂಸ್ಥೆ ನೇಮಕಾತಿ ವಿಚಾರದಲ್ಲಿ ನಿಯಮ ಉಲ್ಲಂಘನೆ, ಭ್ರಷ್ಟಾಚಾರದ ಕುರಿತು ನನ್ನ ಗಮನದಲ್ಲಿದೆ, ನೊಂದವರು ದಾಖಲೆ ಸಮೇತ ನನ್ನ ಬಳಿ ಬಂದೆರ ಖಂಡಿತ ನ್ಯಾಯ ದೊರಕಿಸಿಕೊಡುವೆ. ಫಲಾನುಭವಿಗಳಿಗೆ ಅನ್ಯಾಯವಾಗಿದ್ದರೆ ಸಂಸ್ಥೆಗೆ ಎಚ್ಚರಿಕೆ ನೀಡಿ ಹಣ ಹಿಂತಿರುಗಿಸುವ ಕುರಿತು ಸಂದೇಶ ರವಾನಿಸಿ, ಹಣ ನೀಡದ ಪಕ್ಷದಲ್ಲಿ ಮುಂದಿನ ಕ್ರಮ ವಹಿಸಲಾಗುವುದು. -ಮಂಜುನಾಥ್, ಶಾಸಕ, ಹನೂರು ಕ್ಷೇತ್ರದ ಶಾಸಕ

ನಾನು ಡಿಡಿಪಿಐ ಅವರಿಗಿಂತ ಹಿರಿಯ ಅಧಿಕಾರಿ, ಆದರೆ ಅಬ್ದುಲ್ ಕಲಾಂ ಫೌಂಡೇಷನ್‌ ಸಂಸ್ಥೆಗೆ, ಯೋಗ, ಅಟೆಂಡರ್, ಕಂಪ್ಯೂಟರ್ ಅತಿಥಿ ಶಿಕ್ಷಕರ ನೇಮಕದ ಕುರಿತ ಈ ವಿಚಾರ ನನ್ನ ಗಮನಕ್ಕೆ ತಂದಿಲ್ಲ, ಈ ರೀತಿ ಆದೇಶ ನೀಡಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟ ಕ್ರಮವೂ ಸರಿಯಲ್ಲ, ಕೂಡಲೆ ಅವರನ್ನು ಕರೆದು ಈಬಗ್ಗೆ ಸಮಜಾಯಿಸಿ ನೀಡುವಂತೆ ಕೇಳಲಾಗುವುದು.-ಮೋನಾ ರೋತ್, ಜಿಪಂ ಸಿಇಒಅಬ್ದುಲ್ ಕಲಾಂ ಸಂಸ್ಥೆ ಅಕ್ರಮ ನೇಮಕಾತಿ, ನಿಯಮ ಮೀರಿ ಅಟೆಂಡರ್ ನೇಮಕಾತಿ ಪ್ರಕರಣದಲ್ಲಿ ತನಿಖೆಗೆ ಇಲಾಖೆಯಿಂದ ಡಿವೈಪಿಸಿ ಮತ್ತು ಶಿಕ್ಷಣಾಧಿಕಾರಿಗಳನ್ನು ನೇಮಿಸಿದ್ದೇನೆ, ಅವರು ಈ ಪ್ರಕರಣದಲ್ಲಿ ಸತ್ಯಾಸತ್ಯತೆ ವರದಿ ಸಲ್ಲಿಸುತ್ತಿದ್ದಂತೆ ಮುಂದಿನ ಕ್ರಮ ವಹಿಸುವೆ.-ರಾಮಚಂದ್ರರಾಜೇ ಅರಸ್, ಡಿಡಿಪಿಐ. ಚಾ.ನಗರ

Share this article