ಕುಶಾಲನಗರ: ಪಾದಚಾರಿ ಪಥ ಒತ್ತುವರಿ ತೆರವು ಅತ್ಯಗತ್ಯ

KannadaprabhaNewsNetwork |  
Published : Aug 05, 2026, 02:45 AM IST
ಕುಶಾಲನಗರ ಪಟ್ಟಣದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವ ದೃಶ್ಯಗಳು | Kannada Prabha

ಸಾರಾಂಶ

ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ‘ಆಪರೇಷನ್ ಫುಟ್ಪಾತ್’ ಕುಶಾಲನಗರ ಪಟ್ಟಣದಲ್ಲಿ ಕೂಡ ಪಾದಚಾರಿ ರಸ್ತೆಗಳು ಒತ್ತುವರಿ ಬಗ್ಗೆ ಪಾದಚಾರಿಗಳಲ್ಲಿ ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡುತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಕುಶಾಲನಗರ

ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ‘ಆಪರೇಷನ್ ಫುಟ್ಪಾತ್’ ಕುಶಾಲನಗರ ಪಟ್ಟಣದಲ್ಲಿ ಕೂಡ ಪಾದಚಾರಿ ರಸ್ತೆಗಳು ಒತ್ತುವರಿ ಬಗ್ಗೆ ಪಾದಚಾರಿಗಳಲ್ಲಿ ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡುತ್ತಿದೆ.

ಅತಿ ಶೀಘ್ರ ಬೆಳವಣಿಗೆ ಕಂಡ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸಾಗುತ್ತಿದ್ದು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಾಗುತ್ತವೆ. ಈ ನಡುವೆ ದೈನಂದಿನ ಕೆಲಸ ಕಾರ್ಯಗಳಿಗಾಗಿ ಓಡಾಡುವ ಪಾದಚಾರಿಗಳ ಸಂಖ್ಯೆಯು ಕೂಡ ಅಧಿಕಗೊಂಡಿದೆ.

ಕುಶಾಲನಗರ ಪುರಸಭೆ ಇದನ್ನು ಮನಗಂಡು ಕಳೆದ ಕೆಲವು ವರ್ಷಗಳ ಹಿಂದೆ ಬೈಚನಹಳ್ಳಿ ಬಳಿಯಿಂದ ಗಣಪತಿ ದೇವಾಲಯ ಮೂಲಕ ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನಕ ಅಂದಾಜು ಒಂದು ಕಿಲೋಮೀಟರ್ ಉದ್ದಕ್ಕೆ 25 ಲಕ್ಷ ರು. ವೆಚ್ಚದಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಾಣ ಮಾಡಿತ್ತು. ಇಂಟರ್ಲಾಕ್ ಅಳವಡಿಸಿ ಕಬ್ಬಿಣದ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ.

ಪ್ರಾರಂಭದಲ್ಲಿ ಪಾದಚಾರಿಗಳಿಗೆ ಸೀಮಿತವಾಗಿದ್ದ ಪಾದಚಾರಿ ಮಾರ್ಗ ಕ್ರಮೇಣ ಪಕ್ಕದ ಅಂಗಡಿಗಳ ವ್ಯಾಪಾರಿಗಳಿಂದ, ಕೆಲವು ಬೀದಿಬದಿ ವ್ಯಾಪಾರಸ್ಥರಿಂದ ಹಲವು ರೀತಿಯಲ್ಲಿ ಒತ್ತುವರಿಯಾಗಿ ಪಾದಚಾರಿಗಳು ಪರ್ಯಾಯವಾಗಿ ಹೆದ್ದಾರಿ ರಸ್ತೆ ಮೂಲಕ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಅಪಾಯದಿಂದ ತಪ್ಪಿಸಿಕೊಂಡು ನಡೆದಾಡಬೇಕಾಗಿದೆ.

ಕುಶಾಲನಗರ ಹೆದ್ದಾರಿಯ ಐ ಬಿ ಸಂಪರ್ಕ ರಸ್ತೆಯ ಸಮೀಪ ಸಂಚಾರಿ ಪೊಲೀಸ್ ವೃತ್ತದ ಬಳಿ ಕೆಲವರು ಪಾದಚಾರಿ ರಸ್ತೆಗೆ ನಿರ್ಮಿಸಿದ್ದ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಕ್ರಮವಾಗಿ ತೆರವುಗೊಳಿಸಿ ತಮ್ಮ ವಾಹನಗಳ ಪಾರ್ಕಿಂಗ್ ಕೇಂದ್ರವನ್ನಾಗಿಸಿದ್ದಾರೆ. ಇಲ್ಲಿ ದಿನನಿತ್ಯ ಓಡಾಡುವ ನೂರಾರು ಪಾದಚಾರಿಗಳು ಹೆದ್ದಾರಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಡೆದಾಡಬೇಕಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಟೌನ್ ಪೋಲೀಸ್ ಇನ್‌ಸ್ಪೆಕ್ಟರ್‌ ಪ್ರದೀಪ್ ಕುಮಾರ್ ಪಾದಚಾರಿಗಳು ಓಡಾಡುವ ಮಾರ್ಗವನ್ನು ಒತ್ತುವರಿ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ತಮ್ಮ ಸಹಾಯ ಕೇಳಿದಲ್ಲಿ ತೆರವುಗೊಳಿಸಲು ರಕ್ಷಣೆ ನೀಡಲಾಗುವುದು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಬೀದಿ ವ್ಯಾಪಾರಿಗಳು ಕೆಲವೆಡೆ ರಸ್ತೆಯಲ್ಲಿ ತಮ್ಮ ಕೈಗಾಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಕಾರಣ ಪಾದಚಾರಿಗಳು ವಾಹನಗಳ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಿರುಗಾಡಬೇಕಾಗಿದೆ ಎನ್ನುತ್ತಾರೆ ಹಿರಿಯ ಪತ್ರಿಕಾ ವಿತರಕರಾದ ವಿ ಪಿ ಪ್ರಕಾಶ್ ಅವರು.

ಉತ್ತರ ಭಾರತದ ಹಲವರು ಪಾದಚಾರಿ ಮಾರ್ಗವನ್ನು ತಮ್ಮ ಗೋಲ್ ಗೊಪ್ಪ ಕೇಂದ್ರಗಳನ್ನಾಗಿಸಿದ್ದಾರೆ.

ಅಂಚೆ ಕಚೇರಿ ಮುಂಭಾಗ ತರಕಾರಿ ಅಂಗಡಿಗಳ ತ್ಯಾಜ್ಯಗಳು ಪಾದಚಾರಿ ರಸ್ತೆಯನ್ನು ತುಂಬಿವೆ. ಇನ್ನೊಂದೆಡೆ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆಗೊಳಿಸಿದ್ದು ಇಲ್ಲಿ ಪಾದಚಾರಿಗಳು ಸಂಚರಿಸಲು ದುಸ್ಸಾಹಸ ಪಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಈ ವ್ಯವಸ್ಥೆ ಕಲ್ಪಿಸಿದ್ದರೂ ಇದು ಕೇವಲ ನಾಮ್ ಕೆ ವಾಸ್ತೆ ಎನ್ನುವಂತೆ ಕಾಣುತ್ತಿದೆ.

ಮುಂದೆ ಪಾದಚಾರಿ ಪಥದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಮತ್ತು ಸೈಕಲ್ ರಿಪೇರಿ. ಸರ್ಕಾರಿ ಶಾಲೆಯ ಆವರಣದ ಕೆಳಭಾಗದಲ್ಲಿ ಪಾದಚಾರಿಗಳಿಗೆ ಚಪ್ಪಲಿ ಸೇವೆ ಉಚಿತ ಅನ್ನುವ ಸ್ಥಿತಿ ಖಚಿತ ಎನ್ನುವಂತಾಗಿದೆ.

ಈ ಎಲ್ಲಾ ಸಮಸ್ಯೆಗಳ ನಡುವೆ ಖಾಸಗಿ ಸಂಸ್ಥೆಗಳ ಸಂಪರ್ಕ ಇಲಾಖೆ ಕೇಬಲ್ ನಿರ್ವಹಣೆ ಸಂದರ್ಭದಲ್ಲಿ ಸಂಪೂರ್ಣ ಪಾದಚಾರಿ ಮಾರ್ಗ ಕೆಡವಿ ಹಾಕಿರೋದು. ಅಲ್ಲದೆ ಇತ್ತೀಚೆಗೆ ನಡೆಯುತ್ತಿರುವ ಒಳಚರಂಡಿ ಯೋಜನೆಯ ಮಣ್ಣು ಪಾದಚಾರಿ ರಸ್ತೆ ಮೇಲೆ ಪಾಲಾಗಿದ್ದು ಇದರ ನಿರ್ವಹಣೆ ಹೊಣೆ ಯಾರದ್ದು ಅನ್ನುವಂತಹ ಸ್ಥಿತಿ ಎದುರಾಗಿದೆ.

ಕೂಡಲೇ ಕುಶಾಲನಗರ ಪಟ್ಟಣದಲ್ಲಿ ಪಾದಚಾರಿ ಗಳಿಗೆ ಮೀಸಲಾದ ರಸ್ತೆಯ ಒತ್ತುವರಿ ತೆರವುಗೊಳಿಸಿ ನಿರ್ವಹಣೆ ಮಾಡಿ ಸುರಕ್ಷಿತ ಪಾದಾಚಾರಿ ಮಾರ್ಗ ಅಭಿಯಾನ ಮೂಲಕ ಮಕ್ಕಳು ವೃದ್ದರು ಸೇರಿದಂತೆ ನಾಗರಿಕರಿಗೆ ಸುಲಲಿತವಾಗಿ ಓಡಾಡಲು ಪುರಸಭೆ ಅಧಿಕಾರಿಗಳು ಕೂಡಲೇ ಆಪರೇಷನ್ ಫುಟ್ ಪಾತ್ ಮೂಲಕ ಪಾದಚಾರಿಗಳಿಗೆ ನಡೆದಾಡಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದರು.

ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಯ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆ ಇದೆ. ಆದಷ್ಟು ಶೀಘ್ರದಲ್ಲಿ ಪಟ್ಟಣದಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು.

। ಟಿ ಎಸ್ ಗಿರೀಶ್ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಬಲಪಡಿಸಲು ಸಂಘಟನ ಸೃಜನ ಅಭಿಯಾನ: ಎಸ್.ಆರ್.ಪಾಟೀಲ
ತುಳುನಾಡಿನ ಸೊಬಗನ್ನು ತೆರೆದಿಟ್ಟ ‘ಆಟಿದ ಕಮ್ಮೆನ’ ಕಾರ್ಯಕ್ರಮ