ಮದುವೆ ಊಟ ಉಂಡು ಅನಾರೋಗ್ಯ: ಅಸ್ವಸ್ಥರು ಚೇತರಿಕೆ

ಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ಬೀಗರ ಔತಣ ಸಮಾರಂಭದಲ್ಲಿ ಊಟ ಮಾಡಿದ ನೂರಾರು ಮಂದಿ ಅಸ್ವಸ್ಥರಾಗಿದ್ದು, ಬಹುತೇಕ ಜನರು ಚೇತರಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೆಲವರನ್ನು ಮಡಿಕೇರಿ ಪಿರಿಯಾಪಟ್ಟಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

KannadaprabhaNewsNetwork | Published : Apr 26, 2024 7:53 PM IST

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ಬೀಗರ ಔತಣ ಸಮಾರಂಭದಲ್ಲಿ ಊಟ ಮಾಡಿದ ನೂರಾರು ಮಂದಿ ಅಸ್ವಸ್ಥರಾಗಿದ್ದು, ಬಹುತೇಕ ಜನರು ಚೇತರಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೆಲವರನ್ನು ಮಡಿಕೇರಿ ಪಿರಿಯಾಪಟ್ಟಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ ವೇಳೆ ಕುಶಾಲನಗರ ಮತ್ತು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆ ಮತ್ತು ಹಲವು ಖಾಸಗಿ ಆಸ್ಪತ್ರೆಗಳಲ್ಲಿ 500 ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರು.

ಗುರುವಾರ ಸಂಜೆ 7 ಗಂಟೆ ಯಿಂದ ಶುಕ್ರವಾರ ಮುಂಜಾನೆ 4 ಗಂಟೆ ತನಕ ಕುಶಾಲನಗರ ಮತ್ತು ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಂತಿ ಭೇದಿಗೆ ತುತ್ತಾದ ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 400ಕ್ಕೂ ಅಧಿಕ

ಮಂದಿ ದಾಖಲಾಗಿದ್ದು ಅವರನ್ನು ಮಡಿಕೇರಿ, ಕುಶಾಲನಗರ ಮತ್ತು ಸಮೀಪದ ಪಿರಿಯಾಪಟ್ಟಣ ಆಸ್ಪತ್ರೆಗಳ ಆಂಬುಲೆನ್ಸ್ ವಾಹನಗಳಲ್ಲಿ ಇತರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ ಶ್ರೀನಿವಾಸ್ ತಿಳಿಸಿದ್ದಾರೆ. ಹಲವಾರು ಮಂದಿ ತಮ್ಮ ಸ್ವಂತ ವಾಹನಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಇತರಡೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ತನಿಖೆ:

ಪಿರಿಯಾಪಟ್ಟಣ ಕೊಪ್ಪ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಬಹುತೇಕ ಚೇತರಿಸಿಕೊಂಡಿದ್ದು ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಿರಿಯಾಪಟ್ಟಣ ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾರಂಭ ನಡೆದ ಖಾಸಗಿ ರೆಸಾರ್ಟ್ ನಲ್ಲಿ ದೊರೆತ ಆಹಾರಗಳ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ: ಗುರುವಾರ ಸಂಜೆ ಕೊಪ್ಪ ಗ್ರಾಮದ ದೊಡ್ಡ ಹೊಸೂರು ಭಾಗದ ಪಂಚಾಯತಿ ಸದಸ್ಯರ ಸಹೋದರನ ಪುತ್ರನ ವಿವಾಹ ಅಂಗವಾಗಿ ಕೊಪ್ಪ ಗ್ರಾಮದ ರೆಸಾರ್ಟ್ ಒಂದರಲ್ಲಿ ಬೀಗರೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ 1000ಕ್ಕೂ ಅಧಿಕ ಅತಿಥಿಗಳು ಆಹಾರ ಸೇವಿಸಿ ನಂತರ ವಾಂತಿಭೇದಿಗೆ ತುತ್ತಾಗಿದ್ದರು. ಮದುಮಕ್ಕಳು ಕೂಡ ವಾಂತಿಭೇದಿಗೆ ತುತ್ತಾಗಿ ಎರಡು ಕಡೆ ಕುಟುಂಬ ಸದಸ್ಯರು ಕೂಡ ಕುಶಾಲನಗರ, ಮಡಿಕೇರಿ, ಪಿರಿಯಾಪಟ್ಟಣ , ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಕೊಡಗು ಜಿಲ್ಲೆಯ ಬಹುತೇಕ ಆಸ್ಪತ್ರೆಗಳಿಂದ ವೈದ್ಯರು ಸಿಬ್ಬಂದಿ ಕುಶಾಲನಗರಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರೆ, ಪಿರಿಯಾಪಟ್ಟಣ ತಾಲೂಕಿನ ವ್ಯಾಪ್ತಿಯ ಗ್ರಾಮಾಂತರ ವೈದ್ಯರು ಕೂಡ ರಾತ್ರಿಯಿಡೀ ಚಿಕಿತ್ಸೆ ನೀಡುವುದರಲ್ಲಿ ತೊಡಗಿಸಿಕೊಂಡಿದ್ದರು. ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಆನಂದ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಕುಶಾಲನಗರ ಕೊಪ್ಪ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ 200ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಕುಶಾಲನಗರ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಘಟನೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೂ ತಿಳಿಸಿದ್ದಾರೆ.

Share this article