ಅತ್ಯಾಚಾರ, ಕೊಲೆ ಖಂಡಿಸಿ ಐಎಂಎ ಪ್ರತಿಭಟನೆ

KannadaprabhaNewsNetwork |  
Published : Aug 18, 2024, 01:53 AM IST
೧೭ಕೆಎಂಎನ್‌ಡಿ-೩ಕೋಲ್ಕತ್ತ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಮಂಡ್ಯದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ಮಿಮ್ಸ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಈ ಘಟನೆ ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದೆ. ಘಟನೆ ನಡೆದ ದಿನದಿಂದಲೇ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ. ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ, ಕೊಲೆ ಸಂಬಂಧ ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಪ್ರಕರಣವನ್ನು ನಿಕೃಷ್ಟವಾಗಿ ತನಿಖೆ ನಡೆಸಿ, ಆ ಬಳಿಕ ತನಿಖೆಯನ್ನೇ ಸ್ಥಗಿತಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಲ್ಕತ್ತಾದ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರೆ, ಮಿಮ್ಸ್ ಕಾಲೇಜು ವಿದ್ಯಾರ್ಥಿಗಳು ಮುಷ್ಕರ ನಡೆಸಿದರು.

ನಗರದ ಮಿಮ್ಸ್ ಆಸ್ಪತ್ರೆಯಿಂದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಕಾಲೇಜು ಪ್ರಕರಣದ ವಿಷಯವಾಗಿ ಆಡಳಿತ ಮಂಡಳಿ ಧೋರಣೆ, ಪೊಲೀಸರ ತನಿಖಾ ಕ್ರಮವನ್ನು ಖಂಡಿಸಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಟಿ.ಎನ್.ಮರೀಗೌಡ ಮಾತನಾಡಿ, ಈ ಘಟನೆ ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದೆ. ಘಟನೆ ನಡೆದ ದಿನದಿಂದಲೇ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ. ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ, ಕೊಲೆ ಸಂಬಂಧ ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಪ್ರಕರಣವನ್ನು ನಿಕೃಷ್ಟವಾಗಿ ತನಿಖೆ ನಡೆಸಿ, ಆ ಬಳಿಕ ತನಿಖೆಯನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಕೊಲ್ಕತ್ತ ಹೈಕೋರ್ಟ್ ಪೊಲೀಸರು ಪ್ರಕರಣದ ಬಗ್ಗೆ ನಡೆಸಿದ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ. ಆ ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷ್ಯನಾಶಗೊಳಿಸಿರುವ ಸಾಧ್ಯತೆಗಳಿವೆ. ಆ.೧೫ರಂದು ದೊಡ್ಡ ಗುಂಪಿನಲ್ಲಿ ಜನರು ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ ದಾಂಧಲೆ ಎಬ್ಬಿಸಿದ್ದು ಮಾತ್ರವಲ್ಲದೆ, ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿರುವಂತೆ ತೋರುತ್ತಿದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲೂ ದಾಂಧಲೆ ನಡೆಸಿದವರು ದಾಳಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.

ವೈದ್ಯ ವೃತ್ತಿಯಲ್ಲಿ ಸಹಜವಾಗಿ ಆಗುವ ತೊಂದರೆ ಜೊತೆಗೆ, ಪ್ರಕೃತಿ ಸಹಜವಾಗಿ ತೊಂದರೆಗೆ ಒಳಗಾಗುವ ಹೆಣ್ಣು ಮಕ್ಕಳು ಸಾವಿಗೀಡಾಗುವುದನ್ನು ನೋಡುತ್ತಿದ್ದೇವೆ. ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸುವಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಜವಾಬ್ದಾರಿ ಇರುತ್ತದೆ. ಆಡಳಿತ ಮಂಡಳಿಯ ಉದಾಸೀನ ಧೋರಣೆ ಮತ್ತು ಸಂವೇದನಾಶೀಲತೆಯ ಕೊರತೆ ಪರಿಣಾಮವೇ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಅಕ್ರಮಣ ನಡೆಯುತ್ತಿರುವುದಕ್ಕೆ ಕಾರಣವಾಗಿದೆ ಎಂದು ದೂರಿದರು.

ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಕಾನೂನು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಾ.ಪಿ.ಎಂ.ಜಗದೀಶ್‌ಕುಮಾರ್, ಡಾ.ಗೋಪಾಲಕೃಷ್ಣ ಗುಪ್ತ, ಡಾ.ಎಂ.ವಿನಯ್, ಡಾ.ವಸುಮತಿ ಎಸ್.ರಾವ್, ಡಾ.ಎಂ.ಮಂಜುನಾಥ್, ಡಾ.ವಿ.ಎಲ್.ನಂದೀಶ್, ಡಾ.ಬಿ.ಡಿ..ಕೃಷ್ಣಪ್ಪ, ಡಾ.ಬಿ.ಕೆ.ಸುರೇಶ್, ಡಾ.ಕೆ.ಮೋಹನ್‌ಕುಮಾರ್, ಡಾ.ಬಿ..ಜೆ.ಕೀರ್ತಿ, ಡಾ.ಆರ್.ಜಾಹ್ನವಿ, ಡಾ.ಜೆ.ಬಿಂದಿಯಾ ಇತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌