ಹುಬ್ಬಳ್ಳಿ: ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಮೇ 16ರಿಂದ 19ರ ವರೆಗೆ ನಗರದ ಕಲ್ಲೂರು ಬಡಾವಣೆಯಲ್ಲಿ ನಡೆಯಲಿರುವ ಐಮೆಕ್ಸ್- ಹುಬ್ಬಳ್ಳಿ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಉದ್ಯಮಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಮಾಹಿತಿ ಫಲಕ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಕ್ಲಬ್‌ನಲ್ಲಿ ಶನಿವಾರ ಜರುಗಿತು.ಈ ವೇಳೆ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಡಾ. ಅಶೋಕ ಶೆಟ್ಟರ್ ಮಾತನಾಡಿ, ಐಮೆಕ್ಸ್ ಮೇಳದಲ್ಲಿ ಉತ್ಕೃಷ್ಟ ಕಂಪನಿಗಳು ಪಾಲ್ಗೊಂಡು, ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ವಿಶ್ವಾಸವಿದೆ. ಈ ಭಾಗದಲ್ಲೂ ಸಾಕಷ್ಟು ಉದ್ಯಮಿಗಳಿದ್ದು, ಅವರ ಯಶಸ್ವಿ ಕಥೆಗಳು ಹೊಸ ಉದ್ಯಮಿಗಳಿಗೆ ಪ್ರೇರಕವಾಗಬೇಕು ಎಂದರು.ಮುಂದಿನ ಪೀಳಿಗೆಗೆ ಜನರು ಉದ್ಯಮಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ನಮ್ಮ ಉದ್ಯಮದ ಯಶಸ್ವಿ ಕಥೆಗಳು ಅವರಿಗೆ ಸ್ಫೂರ್ತಿದಾಯಕವಾಗಬೇಕು. ಅವರಲ್ಲಿ ದೊಡ್ಡ ಕನಸು ಬಿತ್ತುವಲ್ಲಿ ನಾವು ಮುಂದಾಗಬೇಕು. ಕುಟುಂಬದ ಒಬ್ಬ ವ್ಯಕ್ತಿಯಾದರೂ ಉದ್ಯಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಈಗ ಉದ್ಯಮ ಸ್ಥಾಪನೆಗೆ ಬಹಳಷ್ಟು ಅವಕಾಶಗಳಿವೆ. ಗುಣಮಟ್ಟದ ಉತ್ಪನ್ನ ನೀಡಿದರೆ ಗ್ರಾಹಕರು ಸಂತೃಪ್ತರಾಗುತ್ತಾರೆ. ಆಗ ಉದ್ಯಮ ಪ್ರಗತಿ ಸಾಧಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.ಬಹುತೇಕ ಯುವಜನರೇ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಬರುತ್ತಾರೆ. ಆದರೆ, ಸರಿಯಾದ ಮಾಹಿತಿ ಮಾರ್ಗದರ್ಶನವಿಲ್ಲದೆ ಎಡವುತ್ತಿದ್ದಾರೆ. ಇತ್ತೀಚೆಗೆ ಪಾರಂಪರಿಕ ವಸ್ತುಗಳ ತಯಾರಿಕೆಯ ಸ್ಟಾರ್ಟ್‌ಅಪ್ ಸಹ ಆರಂಭವಾಗಿದೆ. ಅದು ದೊಡ್ಡ ಉದ್ಯಮವಾಗಿ ಬೆಳೆಯುವ ಸಠಧ್ಯತೆಯಿದ್ದು, ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.ವಿಭವ ಇಂಡಸ್ಟ್ರೀಸ್ ಸಿಇಒ ನಂದಕುಮಾರ ಎಚ್.ಎನ್. ಮಾತನಾಡಿ, 90ರ ದಶಕದ ನಂತರ ಹುಬ್ಬಳ್ಳಿ ಭಾಗದಲ್ಲಿ ಕೈಗಾರಿಕೆ ಚಟುವಟಿಕೆಗಳು ವೇಗ ಪಡೆಯಿತು. ಸರ್ಕಾರ ಬದಲಾದ ಹಾಗೆ ಔದ್ಯೋಗಿಕ ನೀತಿ ಬದಲಾಗುತ್ತವೆ. ಹಣಕಾಸಿನ ಹರಿವು ಹೆಚ್ಚು- ಕಡಿಮೆಯಾಗುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ, ಅಭಿವೃದ್ಧಿಯತ್ತ ಸಾಗುತ್ತಿವೆ. ಮತ್ತಷ್ಟು ಉದ್ಯಮಿಗಳು, ಉದ್ಯಮಗಳು ಇಲ್ಲಿ ಸ್ಥಾಪನೆಯಾಗಬೇಕೆಂದರೆ ಪ್ರಚಾರ ಕಾರ್ಯ ಹೆಚ್ಚಾಗಬೇಕು ಎಂದರು.ಸಂಘದ ಅಧ್ಯಕ್ಷ ಗಿರೀಶ ನಲವಡಿ, ಉತ್ತರ ಕರ್ನಾಟಕದ ಕೈಗಾರಿಕೆಗಳು ಹೇಗೆ ನಡೆಯುತ್ತದೆ, ಯಾವೆಲ್ಲ ಸೌಲಭ್ಯಗಳು ಬೇಕು ಎನ್ನುವುದನ್ನು ತಿಳಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ. ಸರ್ಕಾರ ಹಾಗೂ ಖಾಸಗಿ ಕೈಗಾರಿಕೆ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಇದರ ಜತೆಗೆ ಉದ್ಯಮಿ ರತ್ನ ಪ್ರಶಸ್ತಿ ಸಹ ನೀಡಲಾಗುವುದು ಎಂದರು.
ಪ್ರದರ್ಶನದ ಸಂಚಾಲಕ ರಮೇಶ ಪಾಟೀಲ ಮಾತನಾಡಿ, ಇದೊಂದು ಬೃಹತ್ ಮೇಳವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಮೊದಲ ಮೇಳವಾಗಿದೆ. ರಕ್ಷಣೆ, ಕೃಷಿ, ಸ್ಟಾರ್ಟ್ ಅಪ್ ಉದ್ಯಮಿಗಳು ಭಾಗವಹಿಸಲಿದ್ದಾರೆ. ಕೇಂದ್ರ, ರಾಜ್ಯ ಸಚಿವರು ಹಾಗೂ ದೊಡ್ಡ ಉದ್ಯಮಿಗಳು ಸಹ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಉದ್ಯಮಿ ರತ್ನ ಪ್ರಶಸ್ತಿ ಕುರಿತು ಮಾಹಿತಿ ನೀಡಿದ ಉದ್ಯಮಿ ಜೆ.ಸಿ. ಮಠದ, ಪ್ರಸ್ತುತ ವರ್ಷ ಎಂಟು ವಿಭಾಗದಲ್ಲಿ 16 ಮಂದಿಗೆ ಉದ್ಯಮಿ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಹೊಸ ಆವಿಷ್ಕಾರ, ವೇಸ್ಟ್ ಮ್ಯಾನೇಜ್ಮೆಂಟ್ ಕ್ಷೇತ್ರದ ಉದ್ಯಮಿಗಳನ್ನು ಆಯ್ಕೆ ಮಾಡಿದ್ದೇವೆ. ಅಂಗವಿಕಲ ಉದ್ಯಮಿಗಳು ಈವರೆಗೂ ಗಮನಕ್ಕೆ ಬಂದಿಲ್ಲ. ಯಾರಾದರೂ ಇದ್ದರೆ ಸಂಘದ ಗಮನಕ್ಕೆ ತರಬಹುದು. ಮೇ 6ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.ಸಮಾರಂಭದಲ್ಲಿ ಡಿಐಸಿ ಜಂಟಿ ನಿರ್ದೇಶಕ ಶಿವಪುತ್ರಪ್ಪ ಎಚ್., ಉದ್ಯಮಿ ಎಂ.ಎಸ್. ಬಿಡಸಾರಿಯಾ ಇದ್ದರು.