ರಾಜ್ಯದ 5 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆಹಾನಿಗೆ ಶೀಘ್ರ ಪರಿಹಾರ: ಸಿದ್ದರಾಮಯ್ಯ

KannadaprabhaNewsNetwork |  
Published : Sep 16, 2025, 01:00 AM IST
15ಡಿಡಬ್ಲೂಡಿ1ಕೃಷಿ ವಿವಿಯಲ್ಲಿ ಸೋಮವಾರ ನಡೆದ ಕೃಷಿ ಮೇಳದ ಉದ್ಘಾಟನೆಯಲ್ಲಿ ಮುಖ್ಯಮಂತ್ರಿಗಳು ಶ್ರೇಷ್ಟ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.  | Kannada Prabha

ಸಾರಾಂಶ

ಈ ಮುಂಗಾರು ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದ 80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ವಾಡಿಕೆಗಿಂತ ಕೆಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾದ ಹಿನ್ನಲೆಯಲ್ಲಿ ಅಂದಾಜು 5 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಯಾಗಿವೆ.

ಧಾರವಾಡ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಾಜ್ಯದಲ್ಲಿ ಐದು ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆಯಾದ ಕೂಡಲೇ ಬೆಳೆಹಾನಿಗೆ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಈ ಮುಂಗಾರು ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದ 80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ವಾಡಿಕೆಗಿಂತ ಕೆಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾದ ಹಿನ್ನಲೆಯಲ್ಲಿ ಅಂದಾಜು 5 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಯಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಕೂಡಲೇ ಬೆಳೆ ಪರಿಹಾರ ಒದಗಿಸಲಾಗುವುದು ಎಂದರು.

ಪ್ರಸ್ತುತ ಹಾಲು ಉತ್ಪಾದನೆಯಲ್ಲಿ ಗುಜರಾತ ಮೊದಲ ಸ್ಥಾನ ಹಾಗೂ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 1 ಕೋಟಿ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಬೇಕಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆ, ತೋಟಗಾರಿಕೆ, ತರಕಾರಿ ಬೆಳೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದ ಮುಖ್ಯಮಂತ್ರಿಗಳು, ಪ್ರಸ್ತುತ ದೈಹಿಕ ಶ್ರಮ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಸಕ್ಕರೆ ಕಾಯಿಲೆ ಬರುತ್ತಿದೆ. ಆದ್ದರಿಂದ ಸಕ್ಕರೆ ಪ್ರಮಾಣ ಕಡಿಮೆ ಇರುವ ಸಿರಿಧಾನ್ಯಗಳನ್ನು ರೈತರು ಬೆಳೆಯಲು ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಿ ಎಂದರು.

ಕರ್ನಾಟಕದಲ್ಲಿ ಶೇ. 40ಕ್ಕಿಂತ ಕಡಿಮೆ ಪ್ರದೇಶ ನೀರಾವರಿ ಹೊಂದಿದೆ. ಇನ್ನುಳಿದ ಶೇ. 60ರಷ್ಟು ಮಳೆಯಾಶ್ರಿತ ಕೃಷಿಭೂಮಿಯಾಗಿದ್ದು, ಕೃಷಿ ವಿವಿ ಅಂತಹ ಸಂಸ್ಥೆಗಳು ಮಳೆಯಾಶ್ರಿತ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಉತ್ಕೃಷ್ಟವಾಗಿ ಬೆಳೆಯಬೇಕೆಂದು ಸಂಶೋಧನೆ ಮಾಡಿ ಅದನ್ನು ರೈತರಿಗೆ ಮುಟ್ಟಿಸುವ ಕೆಲಸ ಇನ್ನೂ ಹೆಚ್ಚು ಮಾಡಬೇಕಿದೆ. ಹೆಚ್ಚು ಸಂಶೋಧನೆ ಹಾಗೂ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ವಿವಿ ಕಾರ್ಯ ಮಾಡಲಿ ಎಂದರು.

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಅಬ್ಬಯ್ಯ ಪ್ರಸಾದ, ಎಫ್‌.ಎಚ್‌. ಜಕ್ಕಪ್ಪನವರ, ಶ್ರೀನಿವಾಸ ಮಾನೆ, ವಿಜಯಾನಂದ ಕಾಶಪ್ಪನವರ, ಹೆಸ್ಕಾಂ ಅಧ್ಯಕ್ಷ ಅಜೀಮ್‌ ಪೀರ ಖಾದ್ರಿ, ಹು-ಡಾ ಅಧ್ಯಕ್ಷ ಶಾಕೀರ ಸನದಿ ಸೇರಿದಂತೆ ಅನೇಕರು ಇದ್ದರು. ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಸ್ವಾಗತಿಸಿದರು.

ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಟ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.ಹೊರಟ್ಟಿಗೆ ಪ್ರಗತಿ ಪರ ರೈತ ಪ್ರಶಸ್ತಿ ಕೊಡಿ:

100ಕ್ಕೂ ಹೆಚ್ಚು ಆಕಳುಗಳನ್ನು ಸಾಕಿ ಕೃಷಿ ಮಾಡುತ್ತಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮುಂದಿನ ವರ್ಷ ಕೃಷಿ ವಿಶ್ವವಿದ್ಯಾಲಯ ಪ್ರಗತಿ ಪರ ಕೃಷಿಕ ಪ್ರಶಸ್ತಿ ನೀಡಬೇಕೆಂದು ಹೇಳುವ ಮೂಲಕ ಕೃಷಿ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟ್ಟಿ ಅವರನ್ನು ಅಪಾರವಾಗಿ ಹೊಗಳಿದರು.ಅವರಂತೂ ರಾಜಕೀಯದಲ್ಲಿ ನಿವೃತ್ತಿಯಾಗಲ್ಲ, ಈಗಾಗಲೇ 8 ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದು, ಹತ್ತು ಬಾರಿ ಗೆದ್ದರೂ ಅಚ್ಚರಿ ಏನಿಲ್ಲ. ಅವರ ದಾಖಲೆ ಮುರಿಯಲು ಯಾರಿಗೂ ಸಾಧ್ಯವಿಲ್ಲ. ಹಾಗೆಯೇ, ಕೃಷಿಯಲ್ಲೂ ಸಹ ಅವರು ಮುಂಚೂಣಿಯಲ್ಲಿದ್ದು, ರಾಜ್ಯದ ರೈತರಿಗೆ ಅವರು ಪ್ರೇರಣೆ. ಹೀಗಾಗಿ ಅವರಿಗೆ ಪ್ರಗತಿಪರ ರೈತ ಎಂದು ಪ್ರಶಸ್ತಿ ನೀಡಲು ಮುಖ್ಯಮಂತ್ರಿಗಳು ಶಿಫಾರಸು ಮಾಡಿದಾಗ ಪ್ರೇಕ್ಷಕರು ಚಪ್ಪಾಳೆ ಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ