ಅತಿವೃಷ್ಟಿಯಿಂದ ಹಾನಿಯಾದಲ್ಲಿ ತಕ್ಷಣಕ್ಕೆ ಪರಿಹಾರ: ಕಾಂತರಾಜ್‌

KannadaprabhaNewsNetwork |  
Published : Jul 20, 2024, 12:46 AM IST
೧೮ಬಿಹೆಚ್‌ಆರ್ ೯: ಬಾಳೆಹೊನ್ನೂರು ಪಟ್ಟಣದ ಭದ್ರಾನದಿ ದಂಡೆಯಲ್ಲಿರುವ ಬಂಡಿಮಠದಲ್ಲಿ ಪ್ರವಾಹ ಪೀಡಿತ ಉಂಟಾಗುವ ಸ್ಥಳಗಳಿಗೆ ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಎನ್.ಆರ್.ಪುರ ತಾಲೂಕಿನ ಯಾವುದೇ ಭಾಗದಲ್ಲಿ ಮಳೆಗೆ ಹಾನಿಯಾದರೆ ಸ್ಥಳಕ್ಕೆ ಕೂಡಲೇ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ನೀಡಲಿದ್ದಾರೆ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ತಿಳಿಸಿದರು.

ಅಧಿಕಾರಿಗಳೊಂದಿಗೆ ಸಮನ್ವಯ ಸಭೆ । ಕಾರ್ಯನಿರ್ವಹಣೆಗೆ ಜವಾಬ್ದಾರಿ ಹಂಚಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಎನ್.ಆರ್.ಪುರ ತಾಲೂಕಿನ ಯಾವುದೇ ಭಾಗದಲ್ಲಿ ಮಳೆಗೆ ಹಾನಿಯಾದರೆ ಸ್ಥಳಕ್ಕೆ ಕೂಡಲೇ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ನೀಡಲಿದ್ದಾರೆ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ತಿಳಿಸಿದರು.ಪಟ್ಟಣದ ವಿವಿಧೆಡೆ ಮಳೆ ಹಾನಿಗೊಳಗಾದ ಪ್ರದೇಶ ಹಾಗೂ ಭದ್ರಾನದಿ ಪ್ರವಾಹಕ್ಕೆ ಒಳಗಾಗುವ ಸ್ಥಳಗಳಿಗೆ ಗುರುವಾರ ಸಂಜೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ 3 ದಿನಗಳಿಂದ ಎನ್.ಆರ್.ಪುರದ ವಿವಿಧೆಡೆ ನಿರಂತರ ಮಳೆಯಾಗುತ್ತಿದ್ದು ಖುದ್ದು ಸ್ಥಳಗಳನ್ನು ಪರಿಶೀಲನೆ ಮಾಡಲು ಕಸಬಾ ಮತ್ತು ಬಾಳೆಹೊನ್ನೂರು ಹೋಬಳಿ ವಿವಿಧ ಪ್ರದೇಶ ಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಲಾಗಿದೆ.

ಹಲವೆಡೆ ಧಾರಾಕಾರ ಮಳೆಗೆ ನೀರು ತುಂಬಿ, ಕೆಲವು ಸೇತುವೆಗಳ ಬದಿಯಲ್ಲಿ ಸೈಡ್ ವಾಲ್‌ಗಳು ಇಲ್ಲದೇ ಹಾನಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಪಿಆರ್ ಇಡಿ ಎಂಜಿನಿಯರ್ ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳೊಂದಿಗೆ ಮಾತನಾಡಿ ತಾತ್ಕಾಲಿಕವಾಗಿ ಸೇತುವೆಗಳ ಸ್ಥಳದಲ್ಲಿ ಪೋಲ್, ರೋಪ್‌ ಹಾಗೂ ಬ್ಯಾರಿಕೇಡ್‌ ಹಾಕಿಸಿ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಪಿಆರ್ ಇಡಿ ಈ ಬಗ್ಗೆ ಸೂಕ್ತ ಅಂದಾಜು ತಯಾರಿಸಿ ಶಾಶ್ವತ ಪರಿಹಾರ ಕಲ್ಪಿಸಲು ಸೂಚಿಸ ಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ಮಾಡಿ. ಅತಿವೃಷ್ಠಿ ವೇಳೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು? ಯಾರ ಜವಾಬ್ದಾರಿ ಏನಿದೆ ಎಂಬುದನ್ನು ತಿಳಿಸಲಾಗಿದೆ. ನಾಡಕಚೇರಿ ವಿಎ ಹಾಗೂ ಆರ್.ಐಗಳು ಹಾನಿ ನಡೆದ ಸ್ಥಳಗಳ ಖುದ್ದು ಸ್ಥಳ ಪರಿಶೀಲಿಸಿ, ದಾಖಲೆ ಪಡೆದು ತಕ್ಷಣಕ್ಕೆ ಪರಿಹಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ.ಬಾಳೆಹೊನ್ನೂರು ಭದ್ರಾನದಿ ದಡದ ಬಂಡಿಮಠದ ಪ್ರವಾಹಪೀಡಿತರನ್ನು ಸ್ಥಳಾಂತರಿಸಲು ಈ ಹಿಂದೆ ಬಿ.ಕಣಬೂರು ಅಕ್ಷರ ನಗರದಲ್ಲಿ ಜಾಗ ಗುರುತಿಸಿದ್ದು, ಆ ಜಾಗ ಶಾಲಾ ಆವರಣಕ್ಕೆ ಬೇಕು ಎಂದು ಗ್ರಾಮಸ್ಥರು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅದರ ಪಕ್ಕದ 1.08 ಎಕರೆ ಜಾಗವನ್ನು ಮತ್ತೊಮ್ಮೆ ಸರ್ವೆ ನಡೆಸಿ ಗುರುತಿಸಿ ಕೂಡಲೇ ಪುನರ್ವಸತಿಗೆ ಕ್ರಮವಹಿಸ ಲಾಗುವುದು. ಎಡಿಎಲ್‌ಆರ್ ಹಾಗೂ ತಹಸೀಲ್ದಾರ್‌ಗೆ ಜಂಟಿ ಸರ್ವೆ ನಡೆಸಿ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಭದ್ರಾ ನದಿಯಲ್ಲಿ ನೀರು ಹೆಚ್ಚಾದರೆ ದಡದ ಮನೆಗಳಿಗೆ ಅನಾಹುತವಾಗುವ ಸಾಧ್ಯತೆಯಿದೆ ಹಾಗೂ ಕೆಲ ಮನೆಗಳಿಗೆ ಈಗಾಗಲೇ ಹಾನಿ ಯಾಗಿದ್ದು, ಅವುಗಳಿಗೆ ತಕ್ಷಣಕ್ಕೆ ಪರಿಹಾರ ನೀಡಬೇಕಿದೆ. ಬಂಡಿಮಠದ ಎಲ್ಲಾ ಗ್ರಾಮಸ್ಥರು ಮನೆಗಳನ್ನು ಸ್ಥಳಾಂತರಿಸುವಂತೆ ಕೋರಿದ್ದು, 1.08 ಎಕರೆ ಜಾಗದಲ್ಲಿ ಅವರಿಗೆ ನಿವೇಶನ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಅತಿವೃಷ್ಠಿ ಗೆ ಸಿಲುಕಿದ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದೆ. ಮನೆಗಳಿಗೆ ನೀರು ನುಗ್ಗುವ, ಹಾನಿ ಯಾಗುವ ಆತಂಕ ಎದುರಾದರೆ ತಕ್ಷಣಕ್ಕೆ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಎನ್.ಆರ್. ಪುರ ವ್ಯಾಪ್ತಿಯಲ್ಲಿ ಈಗಾಗಲೇ 30 ಮನೆಗಳ ಹಾನಿ ಬಗ್ಗೆ ವರದಿ ಯಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದರು.ಮಳೆ ಹೆಚ್ಚಾದ ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಜಿಲ್ಲಾಧಿಕಾರಿ ಆಯಾ ತಹಸೀಲ್ದಾರ್, ಬಿಇಒಯಿಂದ ಮಾಹಿತಿ ಪಡೆದು ನಿರ್ಧಾರಿಸುತ್ತಾರೆ. ಆಯಾ ವಿಭಾಗಗಳ ಉಪ ವಿಭಾಗಾಧಿಕಾರಿಗಳು ರಜೆ ನೀಡಲು ಸಹ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದರು. ಎನ್.ಆರ್.ಪುರ ತಹಸೀಲ್ದಾರ್ ತನುಜಾ ಸವದತ್ತಿ, ತಾಪಂ ಇಒ ನವೀನ್‌ಕುಮಾರ್, ಉಪ ತಹಸೀಲ್ದಾರ್ ನಾಗೇಂದ್ರ, ಆರ್.ಐ. ಮಂಜು, ಗ್ರಾಮ ಲೆಕ್ಕಿಗರಾದ ಸಮೀಕ್ಷಾ, ವಿನಯ್, ನಾಗಶ್ರೀ, ಪಿಡಿಒ ಕಾಶಪ್ಪ, ಬನ್ನೂರು ಗ್ರಾಪಂ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಗೋಪಾಲ್ ಮತ್ತಿತರರು ಹಾಜರಿದ್ದರು. (ಬಾಕ್ಸ್)--

ಮಳೆ ಬಂದಾಗ ಅಧಿಕಾರಿಗಳಿಗೆ ಬಂಡಿಮಠದ ನೆನಪು ಬಾಳೆಹೊನ್ನೂರಿನ ಬಂಡಿಮಠದ ವ್ಯಾಪ್ತಿಗೆ ಮಳೆಗಾಲದ ಸಂದರ್ಭದಲ್ಲಿ ಅತಿಯಾದ ನೀರು ಬಂದಾಗ ಮಾತ್ರ ಅಧಿಕಾರಿಗಳಿಗೆ ಬಂಡಿಮಠ ಎಂಬ ಗ್ರಾಮ ಇದೆ ಎಂದು ನೆನಪಾಗುತ್ತಿದೆಯೇ ಹೊರತು ಬೇರೆ ವೇಳೆ ಈ ಗ್ರಾಮದ ನೆನಪು ಅಧಿಕಾರಿಗಳಿಗೆ ಬರುವುದಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ದೂರಿದ್ದಾರೆ.ಮಳೆಗಾಲದಲ್ಲಿ ನೆಪ ಮಾತ್ರಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಸ್ಥಳಾಂತರದ ಮಾತನ್ನಾಡುತ್ತಿದ್ದು, ಬೇರೆ ಸಂದರ್ಭದಲ್ಲಿ ಈ ಬಗ್ಗೆ ಯಾವುದೇ ಕ್ರಮವಹಿಸುತ್ತಿಲ್ಲ. ಮಳೆಗಾಲಕ್ಕೂ ಮೊದಲೆ ಗ್ರಾಮದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಲ್ಲಿ ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಯೋಚಿಸಬೇಕಿದೆ. ಮನೆಗೆ ಸೂಕ್ತ ಜಾಗ ಸಹ ತೋರಿಸಿಲ್ಲ. ಮನೆ ಕಟ್ಟಲು ಅವಕಾಶ ನೀಡಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲು ಕೇವಲ ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಯಾವುದೇ ಅನಾಹುತಗಳು ಆದರೆ ಅಧಿಕಾರಿಗಳೇ ಹೊಣೆ. ಕೂಡಲೇ ಬಡವರ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

೧೮ಬಿಹೆಚ್‌ಆರ್ ೯:

ಬಾಳೆಹೊನ್ನೂರು ಪಟ್ಟಣದ ಭದ್ರಾನದಿ ದಂಡೆಯಲ್ಲಿರುವ ಬಂಡಿಮಠದಲ್ಲಿ ಪ್ರವಾಹ ಪೀಡಿತ ಉಂಟಾಗುವ ಸ್ಥಳಗಳಿಗೆ ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

PREV

Recommended Stories

ಬೆಂಗಳೂರು ನಗರವೊಂದರಲ್ಲೇ 943 ಟನ್‌ ಆಹಾರ ವ್ಯರ್ಥ: ಸಿಎಂ
ಆಳಂದ ಮತಕಳ್ಳತನ : ಸಾವಿರಾರು ಐಡಿ ಪತ್ತೆ