ಶಿವಮೊಗ್ಗ: ರೈತರ ಜಮೀನುಗಳ ದಾಖಲೆಗಳನ್ನು ರದ್ದು ಮಾಡಲು ನೋಟಿಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಶರಾವತಿ ಮುಳುಗಡೆಯಿಂದ ಸ್ಥಳಾಂತರಗೊಂಡ ಸಂತಸ್ತರ ರೈತರಿಗೆ ಬೇರೆ ಕಡೆ ಜಮೀನು ಮಂಜೂರು ಮಾಡಿದ್ದು, ಕಂದಾಯ ಭೂಮಿ, ಗೋಮಾಳ, ಹುಲ್ಲುಬನ್ನಿ, ಕರಾಬು ಜಮೀನುಗಳಲ್ಲಿ ಇತರೆಯವರಿಗೆ ಜಮೀನು ಮಂಜೂರು ಮಾಡಿದ್ದು, ಅಲ್ಲಿ ಸುಮಾರು ೬೦ ವರ್ಷಗಳಿಂದಲೂ ಹೆಚ್ಚು ಸರ್ಕಾರದಿಂದ ಹಕ್ಕು ಪತ್ರ ಪಡೆದು ಖಾತೆ, ಪಹಣಿ, ದಾಖಲಾಗಿ ಪೋಡು ಮಾಡಿಸಿಕೊಂಡು ನೆಮ್ಮದಿಯಿಂದ ತೋಟಗಳನ್ನು ಮತ್ತು ಇತರೆ ಬೆಳೆಗಳನ್ನು ಬೆಳೆದು ಅಲ್ಲಿಯೇ ಮನೆ ಕಟ್ಟಿಕೊಂಡು ಬ್ಯಾಂಕ್ ವಗೈರೆಗಳಲ್ಲಿ ಸಾಲಪಡೆದು ವ್ಯವಸಾಯ ವೃತ್ತಿ ಮಾಡುತ್ತಿದ್ದಾರೆ. ಕೆಲವು ರೈತರು 30-40 ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದು, ಅವರಿಗೆ ಹಕ್ಕು ಪತ್ರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶರಾವತಿ ಮುಳುಗಡೆ ರೈತರು ಮತ್ತು ಇತರೆ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರ ಹೆಸರಿಗೆ ಇಂಡೀಕರಣ ಮಾಡಿಕೊಂಡಿದ್ದಾರೆ. ಸರ್ಕಾರವೇ ಮಂಜೂರು ಮಾಡಿದ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದ್ದು, ಈ ಜಮೀನುಗಳ ದಾಖಲೆಗಳನ್ನು ವಜಾ ಮಾಡಬೇಕು ಎಂದು ಅರಣ್ಯ ಇಲಾಖೆ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಉಪವಿಭಾಗಾಧಿಕಾರಿಗಳು ರೈತರಿಗೆ ನೋಟಿಸ್ ಕೊಡುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅನಾವಶ್ಯಕವಾಗಿ ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.ಸಂವಿಧಾನದ ಪ್ರಕಾರ ದೇಶದ ಪ್ರತಿಯೊಬ್ಬ ರೈತನಿಗೂ ಜೀವನ ಮಾಡಲು ಸರ್ಕಾರಗಳು ಉದ್ಯೋಗ ದೊರಕಿಸಿ ಕೊಡಬೇಕಾಗಿದೆ. ಸರ್ಕಾರಗಳು ವಿಫಲವಾದಾಗ ರೈತರೇ ಸ್ವಯಂ ಉದ್ಯೋಗ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇವರೆಲ್ಲರು ಸಣ್ಣ ಅತಿ ಸಣ್ಣ ರೈತರಾಗಿದ್ದು, ಈಗ ಸರ್ಕಾರದ ನೋಟಿಸ್ ಅನ್ನು ನೋಡಿ ಸಾಮೂಹಿಕ ಆತ್ಮಹತ್ಯೆಗೂ ಚಿಂತನೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ನೋಟಿಸ್ ಕೊಡುವುದನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ನೋಟಿಸ್ ಕೊಟ್ಟಿರುವ ರೈತರ ದಾಖಲೆಗಳನ್ನು ವಜಾ ಮಾಡಬಾರದು. ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ತಕ್ಷಣವೇ ಹಕ್ಕು ಪತ್ರ ಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಶಾಸಕಿ ಶಾರದಾ ಪೂರ್‍ಯನಾಯ್ಕ್, ರೈತ ಪ್ರಮುಖರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಕೆ.ರಾಘವೇಂದ್ರ, ಇ.ಬಿ.ಜಗದೀಶ್, ಮುಖಂಡರಾದ ಹನುಮಂತ್, ಮಂಜುನಾಥ್, ಕೆ.ಎಲ್.ಅಶೋಕ್, ನಾರಾಯಣ್, ಹನುಮಮ್ಮ ಮತ್ತಿತರರಿದ್ದರು.