- ಕೆಲ ಅಧಿಕಾರಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ತಿಳಿವಳಿಕೆ ಇಲ್ಲ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರು ಜಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಅವೈಜ್ಞಾನಿಕವಾಗಿ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಿಸಿ ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಸರಿಯಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೆಲ ಅಧಿಕಾರಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿಲ್ಲ. ಅರ್ಜಿಗಳನ್ನು ಪರಿಶೀಲಿಸುವ ವೇಳೆ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಬಗರ್ ಹುಕುಂ ಭೂಮಿಗೆ ಹಕ್ಕುಪತ್ರಕ್ಕೆ ಸಲ್ಲಿಸಿದ ಅರ್ಜಿ ನಮೂನೆ 53ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ ಭೂಮಿಯನ್ನು ಮಂಜೂರು ಮಾಡಬೇಕು. ಆದರೆ, ಇದುವರೆಗೂ ಯಾವುದೇ ಸಭೆಗಳನ್ನು ಮಾಡದಿರುವುದು ಏಕೆ ಸರ್ಕಾರವನ್ನು ಪ್ರಶ್ನಿಸಿದರು.ರಾಜ್ಯ ಸರ್ಕಾರ ಇದುವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿಲ್ಲ. ರೈತರನ್ನು ವಂಚಿಸುತ್ತಿದೆ. ರೈತರು ತಾವು ಬೆಳೆದ ಮೆಕ್ಕೆಜೋಳವನ್ನು ಖಾಸಗಿ ವ್ಯಕ್ತಿಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಾವು ಮೆಕ್ಕೆಜೋಳ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಸಹ ಸಿಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಬಗರ್‌ಹುಕುಂ ಸಮಿತಿಯನ್ನು ರಚನೆ ಮಾಡಿ, ಅರಣ್ಯ ಭೂಮಿ ಅರ್ಜಿಗಳನ್ನು ಕೊಡಲೇ ವಿಲೇಪಡಿಸಬೇಕು ಮತ್ತು ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್, ಪ್ರಮುಖರಾದ ಪ್ರಭು, ಆಂಜನೇಯ, ಗಂಡುಗಲಿ, ಪ್ರಕಾಶ್, ಮೂಡಲಗಿರಿಯಪ್ಪ, ಈರಪ್ಪ, ಇಮಾಮ್ ಸಾಬ್, ಮೂರ್ತಪ್ಪ, ಹಾಲಪ್ಪ, ಬಸವರಾಜ ಹಾಜರಿದ್ದರು.
- - --21ಕೆಸಿಎನ್‌ಜಿ1: ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿದರು.