ಭದ್ರಾ ಮೇಲ್ದಂಡೆಗೆ ರು.5300 ಕೋಟಿ ತಕ್ಷಣ ಬಿಡುಗಡೆ ಮಾಡಿ

KannadaprabhaNewsNetwork | Published : Jul 27, 2024 12:51 AM

ಸಾರಾಂಶ

Immediately release Rs.5300 crore to upper bank of Bhadra

-ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ

-------

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ತಕ್ಷಣವೇ ಬಜೆಟ್ ಘೋಷಿತ 5300 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಸಂಸತ್ ಅಧಿವೇಶನದ ನಡುವೆಯೇ ದೆಹಲಿಯಲ್ಲಿ ಜಲಶಕ್ತಿಸಚಿವರ ಭೇಟಿಯಾದ ಸಂಸದ್ವಯರು, ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯ ವೇಗವರ್ಧಿತ ನೀರಾವರಿ ಪ್ರಯೋಜನಾ ಯೋಜನೆಯಡಿ 5300 ಕೋಟಿ ಅನುದಾನ ಬಿಡುಗಡೆ ಮಾಡಿ, ಕರ್ನಾಟಕದ ರೈತರ ನೆರವಿಗೆ ಧಾವಿಸಬೇಕು ಎಂದು ವಿನಂತಿಸಿದ್ದಾರೆ.

ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರುಣಿಸುವ ಮಹತ್ವದ ನೀರಾವರಿ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಿ, ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ 29.90 ಟಿಎಂಸಿ ನೀರನ್ನು ನಾಲ್ಕು ಬರಪೀಡಿತ ಜಿಲ್ಲೆಗಳ 2,55,515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸುವುದಾಗಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರಾವರಿ ಕಲ್ಪಿಸುವುದು ಹಾಗೂ 367 ಕೆರೆಗಳ ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಾಗಿದೆ.

ಈ ಯೋಜನೆಗೆ 2020ರ ಡಿಸೆಂಬರ್ 16ರಂದು 21,473 ಕೋಟಿ ರು. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ಜಲ ಸಂಪನ್ಮೂಲ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ 2020ರ ಡಿಸೆಂಬರ್ 24 ರಂದು 16,125 ಕೋಟಿ ರು. ಗಳಿಗೆ ಸ್ಥಿರೀಕರಿಸಿದೆ. ಬಂಡವಾಳ ಒಪ್ಪಿಗೆ ಸಮಿತಿ 2021 ರ ಮಾರ್ಚ್ 25ರಂದು ಒಪ್ಪಿಗೆ ನೀಡಿದೆಯಲ್ಲದೇ ಉನ್ನತ ಮಟ್ಟದ ಪರಿಶೀಲನಾ ಸಮಿತಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಶಿಫಾರಸ್ಸು ಮಾಡಿದೆ.

2022 ರ ಅ.12ರಂದು ನಡೆದ ಸಾರ್ವಜನಿಕ ಹೂಡಿಕೆ ಮಂಡಳಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ನೀಡಲು ಒಪ್ಪಿಗೆ ಸೂಚಿಸಿದೆ. ಕಳೆದ ವರ್ಷದ ಕೇಂದ್ರದ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವಾಗಿ ಘೋಷಣೆ ಮಾಡಲಾಗಿದೆ. ಬರಪೀಡಿತ ಜಿಲ್ಲೆಗಳ ರೈತರು ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗೊತಗೊಳಿಸುವ ಅಗತ್ಯವಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ ಅಡಿಯಲ್ಲಿ ಘೋಷಣೆ ಮಾಡುವ ಕೆಲಸ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರದ ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿ ಪೂರ್ಣಗೊಳಿಸುವುದು ವಿಳಂಬವಾಗುತ್ತಿದೆ.

ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯ ವೇಗವರ್ಧಿತ ನೀರಾವರಿ ಪ್ರಯೋಜನಾ ಯೋಜನೆ ಅಡಿ 5300 ಕೋಟಿ ಅನುದಾನ ಬಿಡಗಡೆ ಮಾಡಬೇಕು ಹಾಗೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಸಿ.ಆರ್.ಪಾಟೀಲರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

----------------

ಪೋಟೋ: ಭದ್ರಾ ಮೇಲ್ದಂಡೆಗೆ ತಕ್ಷಣ ಘೋಷಿತ 5300 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲರಿಗೆ ಮನವಿ ಸಲ್ಲಿಸಿದರು.

--------

ಫೋಟೋ: 26 ಸಿಟಿಡಿ6

Share this article