ಕನ್ನಡಪ್ರಭ ವಾರ್ತೆ, ಹನೂರು
ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪಟ್ಟಣ ಠಾಣೆಯಿಂದ ಆರಂಭಗೊಂಡ ಪೊಲೀಸ್ ಪಥ ಸಂಚಲನ ಲೊಕ್ಕನಹಳ್ಳಿ ರಸ್ತೆ ಬಳಿಕ ಸಾಗಿ ಮಠದ ಬೀದಿ, ಬಂಡಳ್ಳಿ ರಸ್ತೆ, ಮಲೆ ಮಹದೇಶ್ವರ ಬೆಟ್ಟ ರಸ್ತೆ ಸೇರಿದಂತೆ ಬಸ್ ನಿಲ್ದಾಣ ಪ್ರಮುಖ ರಸ್ತೆಗಳಲ್ಲಿ ನೋಡುಗರ ಕಣ್ಮನ ಸೆಳೆಯಿತು.ಎಸ್ಪಿ ಕವಿತಾ ಮಾತನಾಡಿ, ಶಾಂತಿ ಮತ್ತು ಸೌಹಾರ್ದತೆಯಿಂದ ಗಣಪತಿ ವಿಸರ್ಜನೆ ನಡೆಸಬೇಕು ಎಂಬ ಉದ್ದೇಶದಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಗದಿಗಿಂತ ಹೆಚ್ಚಿನ ಶಬ್ದ ಉಂಟು ಮಾಡುವ ಧ್ವನಿ ವರ್ಧಕ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುವ ಜೊತೆಗೆ ವೃದ್ಧರು, ಪುಟ್ಟಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಯುವಕರ ಮೇಲು ಸಹ ತೊಂದರೆಯನ್ನುಂಟು ಮಾಡುತ್ತದೆ. ಸಾಮಾನ್ಯ ಧ್ವನಿವರ್ಧಕ ಹಾಗೂ ಸಾಂಪ್ರದಾಯಕ ವಾದ್ಯ ಬಳಸಬೇಕು ಎಂದು ತಿಳಿಸಿದರು.
ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಗಾಗಿ ಲಭ್ಯವಿರುವ ಪೊಲೀಸರ ಜೊತೆಗೆ ಗೃಹ ರಕ್ಷಕ ದಳ, ಕೆಎಸ್‍ಆರ್‌ಪಿ ತುಕಡಿಯನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಬಾರಿ 1124 ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಬಾರಿ 1,196 ಗಣಪತಿಗಳನ್ನು ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.ರಸ್ತೆ ಸಂಚಾರ ನಿಯಮ ಪಾಲಿಸಿ: ಮಲೆ ಮಾದೇಶ್ವರ ಬೆಟ್ಟ ಸೇರಿದಂತೆ ವಿವಿಧ ರಸ್ತೆಗಳು ಉತ್ತಮವಾಗಿದ್ದು ವಾಹನ ಸವಾರರು ರಸ್ತೆ ಸಂಚಾರ ನಿಯಮವನ್ನು ಪಾಲಿಸುವುದರ ಮೂಲಕ ಅಪಘಾತಗಳನ್ನು ತಡೆಯಲು ಸಂಚಾರಿ ನಿಯಮಗಳನ್ನು ಪಾಲಿಸಬೇಕಾಗಿದೆ. ಈಗಾಗಿ ಅತಿ ವೇಗವಾಗಿ ಓಡಾಡುವ ವಾಹನ ಸವಾರರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಎಸ್ಪಿ ತಿಳಿಸಿದರು.
ಡಿವೈಎಸ್ಪಿಗಳಾದ ಧರ್ಮೇಂದ್ರ, ಲಕ್ಷ್ಮಯ್ಯ ಸೋಮಣ್ಣ, ಇನ್ಸ್‌ಪೆಕ್ಟರ್‌ಗಳಾದ ಪಿ. ಆನಂದ್ ಮೂರ್ತಿ, ಚಿಕ್ಕರಾಜ ಶೆಟ್ಟಿ, ಜಗದೀಶ್, ಬಸವರಾಜ್, ಶೇಷಾದ್ರಿ ಪೊಲೀಸ್ ಸಬ್ ಇನ್ಸ್ಪೆಪೆಕ್ಟರ್‌ಗಳಾದ ಮಂಜುನಾಥ್ ಪ್ರಸಾದ್, ರವಿ, ಲೋಕೇಶ್, ಚೆಲುವರಾಜ್, ವರ್ಷ,ಆಕಾಶ್ ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಾದ ಗುರುಸ್ವಾಮಿ ಮತ್ತು ಶಿವಕುಮಾರ್ ಶಿವಮೂರ್ತಿ ಸೇರಿದಂತೆ ಜಿಲ್ಲೆಯ ಕೆ ಎಸ್ ಆರ್ ಪಿ ಎರಡು ತುಕಡಿ ಹಾಗೂ ಡಿಆರ್ ಎರಡು ತುಕಡಿ, ಕಮಾಂಡೋ ಪಡೆ, ಪೊಲೀಸ್ ವಾದ್ಯ ಮತ್ತು ದ್ವಿಚಕ್ರ ವಾಹನದಲ್ಲೂ ಸಹ ಸೈರನ್ ಮೊಳಗಿಸಿ ಪೊಲೀಸ್ ಸಿಬ್ಬಂದಿ ಗಮನಸೆಳೆದರು.200 ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.