ಹನುಮಸಾಗರ:
ಕಾರ್ಚಿಕಾಯಿ ಕೃಷಿಕರ ಪಾಲಿಗೆ ಆದಾಯದ ಮೂಲವಾಗಿದ್ದು ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನೈರ್ಸಗಿಕವಾಗಿ ಎರೆ ಭೂಮಿಯಲ್ಲಿ ಬೆಳೆಯುತ್ತದೆ. ಇದು ಮಳೆಯಾಶ್ರಿತ ಬೆಳೆಯಾಗಿದ್ದು, ಯಾವುದೇ ರೀತಿಯ ಆರೈಕೆ, ಗೊಬ್ಬರ ಹಾಗೂ ಬಿತ್ತನೆ ಬೇಡದೇ ಬೆಳೆಯುವ ಬಳ್ಳಿಯಾಗಿದೆ. ಕಪ್ಪು ಮಣ್ಣು ಹೊಂದಿರುವ ಎರೆ ಜಮೀನುಗಳಲ್ಲಿ ಮಾತ್ರ ಕಂಡುಬರುತ್ತಿದ್ದು, ಕುಷ್ಟಗಿ, ತಳುವಗೇರಾ, ಕಂದಕೂರು, ದೋಟಿಹಾಳ, ಹೂಲಗೇರಿ ಸೇರಿದಂತೆ ನಾನಾ ಗ್ರಾಮಗಳ ಎರೆ ಜಮೀನುಗಳಲ್ಲಿ ಸಿಗುತ್ತದೆ.
ಜಮೀನಿಗೆ ತೆರಳುವ ಕೃಷಿಕರು, ಕೂಲಿಕಾರ್ಮಿಕರು ಕಾರ್ಚಿಕಾಯಿ ಆರಿಸಿಕೊಂಡು ಮನೆಗೆ ತಂದು ಹಸಿ ಮೆಣಸಿನಕಾಯಿ, ಅರಿಶಿನ, ಉಪ್ಪು, ಬಳ್ಳೊಳ್ಳಿ ಸೇರಿದಂತೆ ಅಗತ್ಯವಿರುವ ಮಸಾಲೆ ಹಾಕಿ ಎಣ್ಣೆಯಲ್ಲಿ ಕರಿದು ಸ್ವಾಷ್ಟವಾದ ಪಲ್ಯ ಮಾಡುತ್ತಾರೆ. ಇನ್ನೂ ಕೆಲವರು ಅವುಗಳನ್ನು ಸಂಗ್ರಹಿಸಿ ₹ ೮೦ರಿಂದ ₹ ೧೨೦ರ ವರೆಗೆ ಕೆಜಿಯಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕೆಲವು ಸಮಯದಲ್ಲಿ ಬಹಳ ದಿನ ಸಂಗ್ರಹಿಸಲು ಬರುವುದಿಲ್ಲ. ಆ ವೇಳೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.ಔಷಧಿಯ ಗುಣ:
ಔಷಯ ಗುಣಗಳ ಆಗರವಾಗಿರುವ ಕಾರ್ಚಿಕಾಯಿ ರಕ್ತನಾಳಗಳಲ್ಲಿ ತುಂಬಿರುವ ಕೊಬ್ಬನಿ ಅಂಶವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಹೃದಯಾಘಾತ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಕಾರಿಯಾಗಿದ್ದು ಕೀಲು, ಸಂಧು ನೋವುಗಳ ನಿವಾರಣೆಗೂ ಯಕೃತ್ ಸಂರಕ್ಷಕವಾಗಿಯೂ ಮೂತ್ರಪಿಂಡದ ಹರಳುಗಳನ್ನು ಕರಗಿಸಲು ಬಳಕೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆಯ ಜಂತುಗಳು ನಾಶವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಪಾರಂಪರಿಕ ನಂಬಿಕೆ ಜನರಲ್ಲಿ ಇದೆ.