ಮುಂಡಗೋಡ ಸಂತೆಯಲ್ಲಿ ಹೆಚ್ಚಿದ ಬಿಡಾಡಿ ದನಗಳ ಹಾವಳಿ

KannadaprabhaNewsNetwork |  
Published : Aug 05, 2025, 11:46 PM IST
ಮುಂಡಗೋಡ: ತೀವ್ರ ಜನ ಸಾಂದ್ರತೆ ಇರುವ ವೇಳೆಯಲ್ಲಿ ದನಗಳು ಏಕಾ ಏಕಿ ವಾರದ ಸಂತೆ ಮಾರುಕಟ್ಟೆಯಲ್ಲಿ ನುಗ್ಗಿ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ತೊಂದರೆ ಮಾಡುತ್ತವೆ. | Kannada Prabha

ಸಾರಾಂಶ

ಜಿಲ್ಲೆಯಲ್ಲಿಯೇ ದೊಡ್ಡ ಸಂತೆ ಎನಿಸಿಕೊಳ್ಳುವ ಇಲ್ಲಿಯ ವಾರದ ಸಂತೆಗೆ ತಾಲೂಕಿನ ಸುತ್ತಮುತ್ತಲಿನ ಜನ ಸೇರಿದಂತೆ ಪಕ್ಕದ ಗಡಿ ಜಿಲ್ಲೆ ಹಾವೇರಿ ಹಾಗೂ ಧಾರವಾಡ ತಾಲೂಕಿನ ಗ್ರಾಮೀಣ ಭಾಗದ ಜನ ಇಲ್ಲಿಯ ಸಂತೆಗೆ ಬರುತ್ತಾರೆ

ಸಂತೋಷ ದೈವಜ್ಞ ಮುಂಡಗೋಡ

ಬಿಡಾಡಿ ದನಗಳ ಹಾವಳಿ, ರಸ್ತೆ ಮೇಲೆಯೇ ನಡೆಯುವ ಇಲ್ಲಿಯ ವಾರದ ಸಂತೆ ಈಗ ಅವ್ಯಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಸಂತೆ ವ್ಯಾವಾರಸ್ಥರು ಹಾಗೂ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯಲ್ಲಿಯೇ ದೊಡ್ಡ ಸಂತೆ ಎನಿಸಿಕೊಳ್ಳುವ ಇಲ್ಲಿಯ ವಾರದ ಸಂತೆಗೆ ತಾಲೂಕಿನ ಸುತ್ತಮುತ್ತಲಿನ ಜನ ಸೇರಿದಂತೆ ಪಕ್ಕದ ಗಡಿ ಜಿಲ್ಲೆ ಹಾವೇರಿ ಹಾಗೂ ಧಾರವಾಡ ತಾಲೂಕಿನ ಗ್ರಾಮೀಣ ಭಾಗದ ಜನ ಇಲ್ಲಿಯ ಸಂತೆಗೆ ಬರುತ್ತಾರೆ. ಆದರೆ ಜನಜಂಗುಳಿಯಿಂದ ಸಂತೆ ನಡೆಯುತ್ತಿರುವ ವೇಳೆಯೇ ಏಕಾಏಕಿ ಬಿಡಾಡಿ ದನಗಳು ಸಂತೆಯೊಳಗೆ ನುಗ್ಗಿ ಜನರಿಗೆ ಹಾನಿ ಮಾಡುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಜನರ ನೆಮ್ಮದಿ ಕೆಡಿಸಿದ್ದು, ಮಾರುಕಟ್ಟೆಯ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಜನಜಂಗುಳಿಯಿಂದ ಕೂಡುವ ಇಲ್ಲಿಯ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ ವ್ಯವಸ್ಥೆ ಮಾತ್ರ ಕ್ಷೀಣ.

ಬಿಡಾಡಿ ದನಗಳ ಹಾವಳಿ

ತೀವ್ರ ಜನ ಸಾಂದ್ರತೆ ಇರುವ ವೇಳೆಯಲ್ಲಿ ದನಗಳು ಏಕಾಏಕಿ ಸಂತೆ ಮಾರುಕಟ್ಟೆಯಲ್ಲಿ ನುಗ್ಗಿ ವ್ಯಾಪಾರಸ್ಥರಿಗೆ ಹಾನಿ ಮಾಡುತ್ತವೆ. ಮುಂಡಗೋಡ ಸಂತೆಯೊಳಗೆ ಪ್ರವೇಶಿಸುವ ಗ್ರಾಹಕರ ಸ್ಥಿತಿ ಆ ದೇವರಿಗೆ ಪ್ರೀತಿ. ಇದರಿಂದ ಸಂತೆ ಮಾಡಲು ಬರುವ ಗ್ರಾಹಕರಿಗೆ ತಿರುಗಾಡಲಾಗದೆ ಎದುರಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಅಲ್ಲದೇ ಕೆಲ ಬಾರಿ ಗ್ರಾಹಕರಿಗೂ ತಿವಿದು ಗಾಯಗೊಳಿಸಿದ ಉದಾಹರಣೆ ಸಾಕಷ್ಟಿವೆ. ಈ ಹಿಂದೆ ಬಿಡಾಡಿ ದನವೊಂದು ಸಂತೆಯೊಳಗೆ ನುಗ್ಗಿ ಟೊಮೆಟೊ ಹಣ್ಣು ತಿಂದು ಸಂತೆ ವ್ಯಾಪಾರಸ್ಥನಿಂದ ತಳಿತಕ್ಕೊಳಗಾಗಿ ಸಾವನ್ನಪ್ಪಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡಿತ್ತು. ಇಷ್ಟೆಲ್ಲ ಸಮಸ್ಯೆಯಾದರೂ ಕೂಡ ಸಂಬಂಧಿಸಿದ ಪಪಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಕ್ಷಾಂತರ ರೂಪಾಯಿಗೆ ಹರಾಜು ಮಾಡಲಾಗುವ ಸಂತೆ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ಕರ ವಸೂಲಿ ಮಾಡಲಾಗುತ್ತದೆ. ಆದರೆ ಅದಕ್ಕೆ ತಕ್ಕಂತೆ ಸಮರ್ಪಕ ಸೌಲಭ್ಯ ಒದಗಿಸಲಾಗುತ್ತಿಲ್ಲ ಎಂಬುವುದೇ ಪ್ರಜ್ಞಾವಂತ ನಾಗರಿಕರ ಅಂಬೋಣ. ಒಟ್ಟಾರೆ ಮುಂಡಗೋಡ ಸಂತೆ ಮಾರುಕಟ್ಟೆಗೆ ಹೇಳುವವರು ಕೇಳುವವರಿಲ್ಲದ ಕೊಂಡವಾಡದಂತಾಗಿದ್ದು, ಇಂತಹ ಸ್ಥಿತಿಯಲ್ಲಿಯೇ ಸಂತೆ ಮಾಡಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ.

ರಸ್ತೆ ಮೇಲೆಯೇ ವ್ಯಾಪಾರ:

ಮಾರುಕಟ್ಟೆ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಅಂಚಿನಲ್ಲಿಯೇ ಇರುವುದರಿಂದ ಹಲವು ಸಂತೆ ವ್ಯಾಪಾರಸ್ಥರು ರಸ್ತೆ ಮೇಲೆಯೇ ಕುಳಿತು ವ್ಯಾಪಾರ ಮಾಡುವುದರಿಂದ ಪ್ರತಿ ಸೋಮವಾರ ಹುಬ್ಬಳ್ಳಿ ರಸ್ತೆಯಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ವಾಹನ ಸವಾರರು ಇಲ್ಲಿಂದ ದಾಟಿ ಹೋಗಲು ಹರಸಾಹಸ ಪಡಬೇಕಾಗುತ್ತದೆ. ಪಪಂ ಪಟ್ಟಣದ ಸುವ್ಯವಸ್ಥೆ ಬಗ್ಗೆ ಕಾಳಜಿ ವಹಿಸುವ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಬಿಡಾಡಿ ದನಗಳನ್ನು ತಮ್ಮ ತಮ್ಮ ಮನೆಯಲ್ಲಿ ಕಟ್ಟಿಕೊಳ್ಳುವ ಬಗ್ಗೆ ಸಾರ್ವಜನಿಕ ಪ್ರಚಾರ ಮಾಡಲಾಗುವುದಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಡಗೋಡ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಹೇಳಿದ್ದಾರೆ.

ಬಿಡಾಡಿ ದನಗಳು ಸಂತೆಯೊಳಗೆ ನುಗ್ಗಿ ಜನರಿಗೆ ತೊಂದರೆ ಕೊಡುತ್ತಿವೆಯಲ್ಲದೆ ಇದರಿಂದ ಹಲವು ಗ್ರಾಹಕರು ದನಗಳಿಂದ ತಿವಿತಕ್ಕೊಳಗಾಗಿ ಗಾಯಗೊಂಡಿದ್ದಾರೆ. ಏನಾದರೂ ಸಾವು ನೋವು ಸಂಭವಿಸಿದರೆ ಯಾರು ಹೊಣೆ? ದನಗಳ ಮಾಲೀಕರು ತಮ್ಮ ದನಗಳನ್ನು ಕಟ್ಟಿಹಾಕಬೇಕಲ್ಲದೇ, ಪಪಂ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಜನರಿಗೆ ಭದ್ರತೆ ಒದಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಗೌಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ