ಸ್ಟೇಟ್ ಬ್ಯಾಂಕ್ ಬಜಾರ ಶಾಖೆಯಲ್ಲಿ ತುಂಬಾ ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳು ಹೊಂದಿದ್ದಾರೆ. ಆದರೆ ಭಟ್ಕಳ ಬಜಾರ ಶಾಖೆ ಭಟ್ಕಳ ಮುಖ್ಯ ಶಾಖೆಯೊಂದಿಗೆ ವಿಲೀನಗೊಳ್ಳಲಿದೆ ಎನ್ನುವ ವಿಚಾರ ತಿಳಿದು ಬಂದಿದೆ.
ಭಟ್ಕಳ: ಭಾರತೀಯ ಸ್ಟೇಟ್ ಬ್ಯಾಂಕಿನ ಬಜಾರ ಶಾಖೆಯನ್ನು ಮುಖ್ಯ ಶಾಖೆಯೊಂದಿಗೆ ವಿಲೀನ ಮಾಡದಂತೆ ಒತ್ತಾಯಿಸಿ ಆಸರಕೇರಿಯ ಶ್ರೀಭುವನೇಶ್ವರಿ ಕನ್ನಡ ಸಂಘ ಹಾಗೂ ಡಬ್ಲೂ ಎಚ್.ಆರ್.ಕೆ. ಆರ್.ಕೆ.ಫೌಂಡೇಶನ, ವಿಶ್ವ ಮಾನ ಹಕ್ಕು ಭಟ್ಕಳ ಇನ್ನಿತರ ಸಂಘ ಸಂಸ್ಥೆಗಳಿಂದ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯಸ್ಥರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪಟ್ಟಣದ ಸ್ಟೇಟ್ ಬ್ಯಾಂಕ್ ಬಜಾರ ಶಾಖೆಯಲ್ಲಿ ತುಂಬಾ ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳು ಹೊಂದಿದ್ದಾರೆ. ಆದರೆ ಭಟ್ಕಳ ಬಜಾರ ಶಾಖೆ ಭಟ್ಕಳ ಮುಖ್ಯ ಶಾಖೆಯೊಂದಿಗೆ ವಿಲೀನಗೊಳ್ಳಲಿದೆ ಎನ್ನುವ ವಿಚಾರ ತಿಳಿದು ಬಂದಿದೆ. ಭಟ್ಕಳ ಬಜಾರ ಶಾಖೆಯನ್ನು ಭಟ್ಕಳ ಮುಖ್ಯ ಶಾಖೆಗೆ ವಿಲೀನಗೊಳಿಸಲು ಇಲ್ಲಿನ ಖಾತೆದಾರರ ತೀವ್ರ ವಿರೋಧವಿದೆ. ಈ ವಿಲೀನಗೊಳ್ಳುವ ಪ್ರಕ್ರಿಯೆ ವಿಚಾರ ಕೈಬಿಡಬೇಕು. ಮುಖ್ಯ ಶಾಖೆಗೆ ಬಜಾರ ಶಾಖೆಯು ವಿಲೀನಗೊಳಿಸಿದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ಮುಖ್ಯ ಶಾಖೆಯಲ್ಲಿ ಬ್ಯಾಂಕಿನ ಖಾತೆದಾರರ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರುತ್ತದೆ ಹಾಗೂ ಮುಖ್ಯ ಶಾಖೆಯ ಹತ್ತಿರ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಖಾತೆ ಹೊಂದಿದ್ದ ವೃದ್ದರು, ಮಹಿಳೆಯರಿಗೆ ವಾಹನದಲ್ಲಿ ಬರಲು ತೊಂದರೆಯಾಗುತ್ತದೆ. ಹೀಗಾಗಿ ಖಾತೆದಾರರು, ಸಾರ್ವಜನಿಕರ ಹಿತದೃಷ್ಟಿಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಬಜಾರ್ ಶಾಖೆಯನ್ನು ಭಟ್ಕಳ ಮುಖ್ಯ ಶಾಖೆಯೊಂದಿಗೆ ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು. ಒಂದೊಮ್ಮೆ ವಿಲೀನಗೊಳಿಸುವ ಪ್ರಕ್ರಿಯೆ ಮುಂದಾಗಿದ್ದರೆ ಇದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ. ಒಂದು ವೇಳೆ ನಮ್ಮ ಮನವಿ ಮೀರಿ ವಿಲೀನಗೊಳಿಸದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಗ್ರಾಹಕರೊಂದಿಗೆ ಹಾಗೂ ಸಂಘ ಸಂಸ್ಥೆಗಳೊಂದಿಗೆ ಬ್ಯಾಂಕಿನ ಎದುರು ಧರಣಿ ಮಾಡುವುದು ಅನಿವಾರ್ಯವಾದೀತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸ್ಟೇಟ್ ಬ್ಯಾಂಕಿನ ಬಜಾರ ಶಾಖೆಯ ವ್ಯವಸ್ಥಾಪಕ ಕೆ.ಎಂ. ಮಲಿಕಾರ್ಜುನಯ್ಯ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ಅವರಿಗೂ ಬ್ಯಾಂಕ್ ವಿಲೀನಗೊಳಿಸದಂತೆ ಮನವಿ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಎಚ್.ಆರ್.ಕೆ.ಆರ್.ಕೆ. ಫೌಂಡೇಶನ ಭಟ್ಕಳ, ವಿಶ್ವ ಮಾನ ಹಕ್ಕು ಭಟ್ಕಳ ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಈಶ್ವರ ನಾಯ್ಕ, ಚಂದ್ರು ನಾಯ್ಕ, ಜಯಶಂಕರ ನಾಯ್ಕ, ದೀಲೀಪ ನಾಯ್ಕ, ಮನಮೋಹನ ನಾಯ್ಕ ಮುಂತಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.