ಕನ್ನಡಪ್ರಭ ವಾರ್ತೆ ಮಳವಳ್ಳಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ಬೀದಿ ಬದಿಯಲ್ಲಿ ಕರಿದ ಕುರುಕಲು ತಿಂಡಿಗಳನ್ನು ಸೇವಿಸುವುದರಿಂದ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಪ್ರಿಡ್ಜ್ ನಲ್ಲಿ ಇಟ್ಟ ತಂಗಳು ಆಹಾರ ಸೇವಿಸುವುದನ್ನು ಬಿಟ್ಟು ಅಗತ್ಯತೆಗೆ ತಕ್ಕಷ್ಟು ಆಹಾರವನ್ನು ಆಗಿಂದಾಗ್ಗೆ ತಯಾರಿಸಿ ಬಿಸಿಯಾದ ಆಹಾರ ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಅಂಗಡಿ, ಮಾರುಕಟ್ಟೆಗಳಲ್ಲಿ ಸಿಗುವ ವಿವಿಧ ಬಗೆಯ ಪೋಷಕ ಪದಾರ್ಥಗಳನ್ನು ತ್ಯಜಿಸಬೇಕು ಎಂದು ಮನವಿ ಮಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಗಸನಪುರ ವೃತ್ತದ ಮೇಲ್ವಿಚಾರಕಿ ಶೈಲಜಾ ಮಾತನಾಡಿ, ಕೇಂದ್ರ ಸರ್ಕಾರವು ಪ್ರಸ್ತುತ ಸಾಲಿನಲ್ಲಿ ಸುಪೋಷಿತ ಕಿಶೋರಿ ಸಶಕ್ತ ನಾರಿ ಎಂಬ ಧ್ಯೇಯ ವಾಕ್ಯದೊಂದಿಗೆ ಹದಿಹರೆಯದವರನ್ನು ಸಬಲೀಕರಣ ಮಾಡುವ ಜೊತೆಗೆ ರಾಷ್ಟ್ರವನ್ನು ಬಲಪಡಿಸುವ ಅಭಿಯಾನ ಆರಂಭಿಸಿದೆ ಎಂದರು.
ಈ ಮೂಲಕ ಮಕ್ಕಳು ಮತ್ತು ಹದಿಹರೆದವರಲ್ಲಿ ಕಂಡು ಬರುವ ಅಪೌಷ್ಠಿಕತೆ ಹೋಗಲಾಡಿಸುವುದು. ಗರ್ಭಿಣಿಯರಲ್ಲಿ ರಕ್ತಹೀನತೆ ತಪ್ಪಿಸುವುದು. ಸಶಕ್ತ ಭಾರತ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವಿಜಯ ಮನು ಮಾತನಾಡಿದರು.
ಮೇಲ್ವಿಚಾರಕರಾದ ಶೈಲಜಾ, ಸರಳಾ, ಗ್ರಾಪಂ ಸದಸ್ಯ ಉಮೇಶ್, ಕೆಂಪಾಜಮ್ಮ ಸೇರಿ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.