ಶೇ.56ರಷ್ಟು ಮೀಸಲಾತಿ ಜಾರಿಗೊಳಿಸಿ: ಉಗ್ರಪ್ಪ

KannadaprabhaNewsNetwork |  
Published : Apr 23, 2026, 02:00 AM IST
ವಿ.ಎಸ್‌. ಉಗ್ರಪ್ಪ | Kannada Prabha

ಸಾರಾಂಶ

ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಸಂವಿಧಾನ ಬದ್ಧವಾಗಿ ಬರಬೇಕಾದ ಮೀಸಲಾತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಸಿದುಕೊಳ್ಳುತ್ತಿವೆ. ಬರೀ ಚುನಾವಣೆ ಸಮಯದಲ್ಲಿ ಮೀಸಲಾತಿ ಕೊಡುತ್ತೇವೆಂದು ಹೇಳಿಕೆ ನೀಡಿ, ಜಾರಿಗೆ ತರದೇ ಜನರಿಗೆ ಮೋಸ ಮಾಡುತ್ತಿವೆ.

ಧಾರವಾಡ:

ಶೇ. 56ರಷ್ಟು ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಕಾನೂನು ಜಾರಿಗೆ ತಂದಿದ್ದು, ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಮಾಜಿ ಸಂಸದ, ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಸಂವಿಧಾನ ಬದ್ಧವಾಗಿ ಬರಬೇಕಾದ ಮೀಸಲಾತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಸಿದುಕೊಳ್ಳುತ್ತಿವೆ. ಬರೀ ಚುನಾವಣೆ ಸಮಯದಲ್ಲಿ ಮೀಸಲಾತಿ ಕೊಡುತ್ತೇವೆಂದು ಹೇಳಿಕೆ ನೀಡಿ, ಜಾರಿಗೆ ತರದೇ ಜನರಿಗೆ ಮೋಸ ಮಾಡುತ್ತಿವೆ. 2022ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಿಸಿ ಕಾನೂನು ಮಾಡಿತ್ತು. ಆದರೆ, ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಮುತುವರ್ಜಿ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.

ಸಾಮಾಜಿಕ ನ್ಯಾಯಕ್ಕೆ ಗ್ರಹಣ:

ನಮ್ಮ ಸಮಾಜದಲ್ಲಿ ಸಾಮಾಜಿಕ ನ್ಯಾಯಕ್ಕೆ ಗ್ರಹಣ ಹಿಡಿದಿದೆ. ಇದಕ್ಕೆ ನೇರ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದ ಅವರು, ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿಗಳು ಬರೀ ಕೇಂದ್ರಕ್ಕೆ ಪತ್ರ ಬರೆದರೆ ಸಾಲದು. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ದೆಹಲಿಗೆ ಹೋಗಿ ಕುಳಿತು ಕಾನೂನನ್ನು ಪರಿಚ್ಛೇದ 9ಕ್ಕೆ ಸೇರ್ಪಡೆ ಮಾಡಬೇಕು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಈ ಇಚ್ಛಾಶಕ್ತಿ ಏತಕ್ಕೆ ತೋರುತ್ತಿಲ್ಲ ತಿಳಿಯುತ್ತಿಲ್ಲ. ಇದೇ ರೀತಿ ಕಾಲಹರಣ ಮಾಡಿದರೆ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ಜನಾಂಗ ಕಟ್ಟಿಕೊಂಡು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಸಿದರು.

ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖರ ಗಮನಕ್ಕೆ ತಂದಿದ್ದು, ಹೇಳಿಕೆಯಿಂದ ನ್ಯಾಯ ಸಿಗುವುದಿಲ್ಲ. ಕಾನೂನು ಕಾರ್ಯರೂಪಕ್ಕೆ ತರಲು ಬರುವ ದಿನಗಳಲ್ಲಿ ಅಹೋರಾತ್ರಿ ಹೋರಾಟಕ್ಕೂ ತಾವು ಸಿದ್ಧರಿರುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಗ್ರಪ್ಪ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಮುಖ್ಯಮಂತ್ರಿ ಸ್ಥಾನಬೇಕು ಎನ್ನುವ ಅಪೇಕ್ಷೆ ತಪ್ಪೇನಿಲ್ಲ. ಬಿಜೆಪಿಯ ಈ ಹಿಂದಿನ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾಗಿರುವ ಉದಾಹರಣೆ ಇದೆ. ಅದೇನೆ ಇದ್ದರೂ ಪಕ್ಷದ ಹೈಕಮಾಂಡ್‌ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾತ್ರ ಮಾಡಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ನಾಯಕ, ಮೋಹನ ಗುಡಿಸಲಮನಿ, ವಕೀಲರಾದ ಅಶೋಕ ಹಂಚಿನಮನಿ, ಕೆ.ಎಚ್‌. ಪಾಟೀಲ ಮತ್ತಿತರರು ಇದ್ದರು.ಬಾಕ್ಸ್‌...

ಮೀಸಲಾತಿಗೆ ಮಾಟ-ಮಂತ್ರ...

ಮುಖ್ಯಮಂತ್ರಿ ಅಸಹಾಯಕ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಮಾಜಿ ಸಚಿವ ಕೆ.ಎನ್‌. ರಾಜಣ್ಣ ಮುಖ್ಯಮಂತ್ರಿಗೆ ಯಾರೋ ಮಾಟ ಮಾಡಿದ್ದಾರೆ ಎಂಬ ಹೇಳಿಕೆಗೆ ಉಗ್ರಪ್ಪ, ರಾಜಣ್ಣ ಅವರ ಹೆಸರು ಹೇಳದೇ ಪ್ರಸ್ತಾಪಿಸಿದರು. ಶೇ. 56ರಷ್ಟು ಮೀಸಲಾತಿ ಕೊಡಲು ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಮುಖ್ಯಮಂತ್ರಿಗೆ ಯಾರಾದರೂ ಮಾಟ ಮಾಡಿಸಿದ್ದಾರೆಯೇ ಎಂಬುದನ್ನು ಸಹ ಅವರು ತನಿಖೆ ನಡೆಸಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.

22ಡಿಡಬ್ಲೂಡಿ1

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ರದ್ದು
ಮಜೇಥಿಯಾ, ಫ್ರೊ.ಅಚ್ಯುತ್‌, ಸಂಗ್ರೇಶಿಗೆ ಕವಿವಿ ಗೌಡಾ