ಕನ್ನಡಪ್ರಭ ವಾರ್ತೆ ಮಂಡ್ಯ
ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಗೂ ಮುನ್ನ ನೇರ ವೇತನ ಪಾವತಿ ಜಾರಿ ಮಾಡುವ ಮೂಲಕ ಸಿ ಮತ್ತು ಡಿ ದರ್ಜೆ ನೌಕರರ ಹಿತ ಕಾಪಾಡಬೇಕು ಎಂದು ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸುವಾಗ ದಲಿತ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ಘೋಷಿಸಿದೆ. ವಾಸ್ತವದಲ್ಲಿ ಈಗಾಗಲೇ ಈ ಹುದ್ದೆಗಳಲ್ಲಿರುವ ಬಹುತೇಕರು ದಲಿತ ಇಲ್ಲವೆ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಸರ್ಕಾರ ಈ ಮೀಸಲಾತಿ ಘೋಷಣೆ ಅಪ್ರಸ್ತುತವಾಗಿದ್ದು ಅದರ ಬದಲು ನೇರ ವೇತನ ಪಾವತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ನೂತನ ಮೀಸಲಾತಿ ಜಾರಿ ಹೆಸರಿನಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಯಾವುದೇ ತೊಂದರೆಯಾಗದಂತೆ ಹೊಸ ನೇಮಕಾತಿಗಳಿಗೆ ಮಾತ್ರ ಇದನ್ನು ಅನ್ವಯಿಸುವಂತೆ ತಿದ್ದುಪಡಿ ಮಾಡಬೇಕಿದೆ. ಇಲ್ಲದಿದ್ದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಹೊರಗುತ್ತಿಗೆ ನೌಕರರನ್ನು ಏಜೆನ್ಸಿಗಳು ಸಂಕಷ್ಟಕ್ಕೆ ಸಿಲುಕಿಸುವ ಆಪಾಯವಿದೆ ಎಂದು ಹೇಳಿದರು.ರಾಜ್ಯದಲ್ಲಿ ಒಂದು ಮುಕ್ಕಾಲು ಲಕ್ಷ ಮಂದಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ದುಡಿದ ಈ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ. ಇಎಸ್ ಐ ಪಾವತಿಯಾಗುತ್ತಿಲ್ಲ. ಇವರ ಕೆಲಸಕ್ಕೆ ಯಾವುದೆ ಭದ್ರತೆ ಇಲ್ಲವಾಗಿದೆ. ಏಜೆನ್ಸಿಗಳು ಹೊರಗುತ್ತಿಗೆ ನೌಕರರನ್ನು ಶೋಷಿಸುತ್ತಿವೆ. ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ರಾಜ್ಯದ ಎಲ್ಲ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಜಾರಿಗೆ ತಂದು ಮಾತು ಉಳಿಸಿಕೊಳ್ಳಬೇಕು ಎಂದರು.ಇದೇ ವೇಳೆ ಶಾಸಕ ಪಿ.ರವಿಕುಮಾರ್ ಅವರು ಹೊರಗುತ್ತಿಗೆ ನೌಕರರ ಸಮಸ್ಯೆ ಆಲಿಸಿ ಹೊರಗುತ್ತಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದ್ದು ಮುಖ್ಯಮಂತ್ರಿಗಳಿಗೆ ನೇರ ವೇತನ ಪಾವತಿ ಜಾರಿಗೊಳಿಸುವಂತೆ ನಾನೂ ಮನವಿ ಮಾಡುತ್ತೇನೆ ಎಂದು ಹೇಳಿದರು.ಬಾಕಿ ಇರುವ ಪೌರಕಾರ್ಮಿಕರ ನೇಮಕಾತಿ ಸಂಬಂಧ ಮುಂದಿನ ವಾರದಿಂದ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನಗರಾಭಿವೃದ್ಧಿ ಕೋಶದ ನಿರ್ದೇಶಕಿ ತುಷಾರಮಣಿ ಭರವಸೆ ನೀಡಿದರು.ರಾಜ್ಯ ಮೆಡಿಕಲ್ ಕಾಲೇಜು ಹೊರಗುತ್ರಿಗೆ ನೌಕರರ ಸಂಘದ ವೆಂಕಟಲಕ್ಷ್ಮಿ, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜು, ಕರುನಾಡ ಸೇವಕರು ಸಂಘಟನೆಯ ಚಂದ್ರಣ್ಣ, ಚಿನ್ನರಾಜು, ಶಿವಕುಮಾರ್, ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು.