ಸುರಪುರ: ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ದುಶ್ಚಟ ಮುಕ್ತ ಸಮಾಜಕ್ಕೆ ಕಂಕಣಬದ್ಧರಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ, ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಹೇಳಿದರು. ನಗರದ ರಂಗಂಪೇಟೆಯ ವೀರಶೈವ ಕಲ್ಯಾಣಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನಡೆದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದುಶ್ಚಟಗಳು ಮನುಷ್ಯನನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಕುಗ್ಗುವಂತೆ ಮಾಡುತ್ತವೆ. ಇವುಗಳ ವಿರುದ್ಧ ಧರ್ಮಸ್ಥಳದ ಧರ್ಮಾಧಿಕಾರಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು. ಧರ್ಮಸ್ಥಳದ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಮಹಾತ್ಮ ಗಾಂಧೀಜಿಯವರು ದುಶ್ಚಟ ಮುಕ್ತ ಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಅವರಂತೆ ಡಾ. ವೀರೇಂದ್ರ ಹೆಗ್ಗಡೆ ಅವರದ್ದಾಗಿದೆ. ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳದ ಕಾರ್ಯಕ್ರಮಗಳು ಸಹಾಯವಾಗುತ್ತಿದೆ. ಉಳಿತಾಯದಿಂದ ಪ್ರಾರಂಭ ಮಾಡಿ ಒಂದು ಕುಟುಂಬಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಗುರುಶಾಂತ ಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಒಳಿತಿಗಾಗಿ ಹೆಗ್ಗಡೆಯವರ ಕಾರ್ಯಗಳು ಸಮಾಜಮುಖಿಯಾಗಿವೆ. ಒಂದು ಸಂಸಾರ ಅತ್ಯಂತ ನೆಮ್ಮದಿ ಜೀವನ ನಡೆಸಲು ಧರ್ಮಸ್ಥಳದ ಯೋಜನೆಗಳು ಸಹಕಾರಿಯಾಗುತ್ತಿವೆ ಎಂದು ನುಡಿದರು. ಅಮರಯ್ಯ ಸ್ವಾಮಿಯವರು ದುಶ್ಚಟ ಭಿಕ್ಷೆ ಸದ್ಗುಣ ದೀಕ್ಷೆ ಎಂಬ ವಿಷಯದ ಬಗ್ಗೆ ಒಂದು ಕುಟುಂದ ವಿಶೇಷ ಉಪನ್ಯಾಸ ನೀಡಿದರು. ಕಲಬುರಗಿ ಯಾದಿಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ್ ವಾರದ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷವಾಗಿ ಕೃಷಿ ಮಾಡಿದ, ಸ್ವ ಉದ್ಯೋಗ ಮಾಡಿದ ಫಲಾನುಭವಿಗಳಿಗೆ ಅನುದಾನ ಹಾಗೂ ವಿಕಲಚೇತನರಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಸಲಕರಣೆ ವಿತರಿಸಲಾಯಿತು. ತಾಲೂಕಿನ ಯೋಜನಾಧಿಕಾರಿ ಸಂತೋಷ್ ಎ.ಎಸ್., ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಸುಮಂಗಲಾ ವಂದಿಸಿದರು. ಗಣ್ಯರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಇದ್ದರು.