ಕನ್ನಡಪ್ರಭ ವಾರ್ತೆ ವಿಜಯಪುರ
2024-25ನೇ ಸಾಲಿಗೆ ಸಿಎಂಕೆಕೆವೈ ಯೋಜನೆಯಡಿ ಕೌಶಲ ತರಬೇತಿ ಕೈಗೊಳ್ಳಲು ಪ್ರಸ್ತುತ ಜಿಲ್ಲೆಯಲ್ಲಿ ಮಾನ್ಯತೆ ಹೊಂದಿದ ಖಾಸಗಿ ತರಬೇತಿ ಸಂಸ್ಥೆಗಳು ಹೊಂದಿರುವ ಜಾಬ್ರೋಲ್ಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮವಾಗಿ ಆಯ್ಕೆ ಮಾಡಿದ ಜಾಬ್ರೋಲ್ಗಳನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ ಮಿಷನ್ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೇ-ನಲ್ಮ್ ಯೋಜನೆಯ ಎಲ್ಲ ಉಪಘಟಕಗಳ ಪ್ರಗತಿ ಪರಿಶೀಲನೆ, ಪಿ.ಎಂ. ಸ್ವ-ನಿಧಿ ಅಡಿ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಪಡೆದು ಸಾಲ ಮಂಜೂರಾತಿ ಹಾಗೂ ವಿತರಣೆಗೆ ಆದ್ಯತಾನುಸಾರ ಕ್ರಮವಹಿಸುವಂತೆಯೂ, ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯಡಿ 8 ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.2024-25ನೇ ಸಾಲಿನ ಡೇ-ನಲ್ಮ್ ಅಭಿಯಾನದಡಿ 410 ಮಹಿಳಾ ಸ್ವ-ಸಹಾಯ ಸಂಘಗಳ ರಚನೆ, 20 ಒಕ್ಕೂಟ ರಚನೆ, 161 ವೈಯಕ್ತಿಕ ಸ್ವಯಂ ಉದ್ಯೋಗ, 11 ಗುಂಪು ಉದ್ಯೋಗ, 204 ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಲಿಂಕೆಜ್ ಗುರಿ ನಿದಿಪಡಿಸಿದ್ದು, ನಿಗದಿತ ಸಮಯದಲ್ಲಿ ಪ್ರಗತಿ ಸಾಧಿಸುವಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಡೇ-ನಲ್ಮ್ ಅಭಿಯಾನದಡಿ ಅರ್ಬನ್ ಲರ್ನಿಂಗ್ ಇಂಟರ್ನ್ಶಿಫ್ ಪ್ರೋಗ್ರಾಂ ಯೋಜನೆಯಡಿ ಜಿಲ್ಲೆಗೆ 58 ಗುರಿ ನಿಗದಿಪಡಿಸಿದ್ದು, ನಿಗದಿತ ಸಮಯದಲ್ಲಿ ಪ್ರಗತಿ ಸಾಧಿಸುವಂತೆ ಅವರು ಸೂಚಿಸಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ. ಕುಂಬಾರ ಅವರು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.