ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ಮಾನೆ ಸೂಚನೆ

KannadaprabhaNewsNetwork | Published : Jun 14, 2024 1:08 AM

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ, ಕಂದಾಯ ಹಾಗೂ ಉಪ ಗ್ರಾಮಗಳ ರಚನೆ, ಸ್ಮಶಾನ ಅಳತೆ, ಸರ್ಕಾರಿ ಶರ್ತು ಕಡಿಮೆ ಪ್ರಕರಣ ವಿಳಂಬ, ಪಡಿತರ ವಿತರಣಾ ಕೇಂದ್ರಗಳ ಆರಂಭ ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಸೇರಿದಂತೆ ನಾನಾ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಹಾನಗಲ್ಲ: ಕುಡಿಯುವ ನೀರಿನ ಸಮಸ್ಯೆ, ಕಂದಾಯ ಹಾಗೂ ಉಪ ಗ್ರಾಮಗಳ ರಚನೆ, ಸ್ಮಶಾನ ಅಳತೆ, ಸರ್ಕಾರಿ ಶರ್ತು ಕಡಿಮೆ ಪ್ರಕರಣ ವಿಳಂಬ, ಪಡಿತರ ವಿತರಣಾ ಕೇಂದ್ರಗಳ ಆರಂಭ ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಸೇರಿದಂತೆ ನಾನಾ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಮಳೆ ಸಮರ್ಪಕವಾಗಿ ಬೀಳದ ಕಾರಣ ಇನ್ನೂ ಸಹ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯಕ್ಕೆ ಅನುಸಾರ ನೀರಿನ ಲಭ್ಯತೆ ಇದ್ದಲ್ಲಿ ಕೊಳವೆ ಬಾವಿ ಕೊರೆಯಿಸುವುದು, ಇಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗದ ಎಇಇ ಸಿ.ಎಸ್. ನೆಗಳೂರ ಅವರಿಗೆ ಸೂಚಿಸಿ, ಮೇ ತಿಂಗಳಿಂದ ಸುರಿದ ಮಳೆ ಪ್ರಮಾಣದ ಕುರಿತು ಮಾಹಿತಿ ಪಡೆದರು. ಮನೆ, ಮನೆಗೆ ಗಂಗೆ ಯೋಜನೆ ಪೂರ್ಣಗೊಂಡಲ್ಲಿ ಅಗೆಯಲಾದ ರಸ್ತೆ ಸರಿಪಡಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಎಂದರು. ಈಗಾಗಲೇ ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆಗೊಂಡಿರುವ ವಿವಿಧ ಗ್ರಾಮಗಳ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸುವಂತೆ ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿ, ಬಾಕಿ ಉಳಿದಿರುವ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ಕ್ರಮ ವಹಿಸಬೇಕು. ವರ್ಷದ ಒಳಗಾಗಿ ತಾಲೂಕಿನ ೧೩,೬೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಕಾಳಜಿ ವಹಿಸಬೇಕು ಎಂದರು. ತಾಲೂಕಿನಲ್ಲಿ ಪಡಿತರ ವಿತರಣಾ ಕೇಂದ್ರಗಳು ಕಡಿಮೆ ಇದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲಸ, ಕಾರ್ಯಗಳನ್ನೆಲ್ಲ ಬದಿಗೊತ್ತಿ ಪಕ್ಕದ ಗ್ರಾಮಗಳಿಗೆ ತೆರಳಿ ಪಡಿತರ ತರುವಂಥ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಪ್ರಸ್ತಾವನೆ ಯಾವ ಹಂತದಲ್ಲಿದೆ ಎನ್ನುವ ಕುರಿತು ಮಾಹಿತಿ ಪಡೆದ ಶಾಸಕ ಮಾನೆ, ಆದಷ್ಟು ಬೇಗ ಅನುಮೋದನೆ ಪಡೆದು ಕೇಂದ್ರಗಳ ಆರಂಭಕ್ಕೆ ಸೂಕ್ತ ಕ್ರಮ ವಹಿಸಿ ಎಂದು ಸೂಚನೆ ನೀಡಿದರು. ಪಹಣಿ ಪತ್ರಿಕೆಗಳಲ್ಲಿ ಸರ್ಕಾರಿ ಕಡಿಮೆ, ಶರ್ತು ಕಡಿಮೆ ಕಡತಗಳ ವಿಲೇವಾರಿಗೆ ಕಾಳಜಿ ವಹಿಸಬೇಕು. ರೈತರಿಗೆ ತೊಂದರೆ ಆಗದಂತೆ ಆದಷ್ಟು ಬೇಗ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಿ. ತಹಸೀಲ್ದಾರ್ ಕಚೇರಿಯಲ್ಲಿ ಕೆಲ ಸಿಬ್ಬಂದಿ ತಮ್ಮ ಕಾರ್ಯದಲ್ಲಿ ವಿಳಂಬ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ಅಂಥ ಸಿಬ್ಬಂದಿಗೆ ನಿಷ್ಕಾಳಜಿ ವಹಿಸದಂತೆ ಗಮನಿಸಿ, ಇಲ್ಲವೇ ಶಿಸ್ತುಕ್ರಮ ಜರುಗಿಸಿ ಎಂದು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು. ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಸ್ಮಶಾನ ಮಂಜೂರಿ ಮಾಡಲಾಗಿದ್ದು, ಅಳತೆ ಮಾಡಿ ಹದ್ದಬಸ್ತ ಮಾಡಲಾಗಿಲ್ಲ. ಅಂಥ ಪ್ರಕರಣ ಗಮನಿಸಿ ಸ್ಥಳ ಗುರುತಿಸಿ, ಅಳತೆ ಮಾಡಿ ಆಯಾ ಗ್ರಾಪಂಗಳಿಗೆ ಹಸ್ತಾಂತರಿಸಬೇಕು. ಈ ಹಿಂದೆ ರೈತರಿಗೆ ಬಗರ್ ಹುಕುಂ ಸಮಿತಿಯಲ್ಲಿ ಅನುಮೋದನೆ ನೀಡಿ ಹಕ್ಕುಪತ್ರ ನೀಡಲಾಗಿದ್ದು, ಆದರೆ ಕೆಲ ಪ್ರಕರಣಗಳಲ್ಲಿ ಪಹಣಿ ಪತ್ರಿಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಅಂಥವುಗಳನ್ನು ಪರಿಶೀಲಿಸಿ, ಸರಿಪಡಿಸಿಕೊಡಿ ಎಂದೂ ಸೂಚಿಸಿದರು. ಶಿರಸ್ತೆದಾರ ಟಿ.ಕೆ. ಕಾಂಬ್ಳೆ, ಸಣ್ಣ ನೀರಾವರಿ ಉಪ ವಿಭಾಗದ ಎಇಇ ಹಾವನೂರ, ಸಹಾಯಕ ಅಭಿಯಂತರ ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article